ಭಾನುವಾರ, ಏಪ್ರಿಲ್ 30, 2023
ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ
ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು
ಬಳ್ಳಾರಿ,ಏ.30(ಕರ್ನಾಟಕ ವಾರ್ತೆ):
ಮತದಾರರು ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಕಂಪ್ಲಿ ತಾಲೂಕು ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಶನಿವಾರ ದೇವಲಾಪುರ ಹತ್ತಿರದ ಉಪ್ಪಾರಹಳ್ಳಿ ಕೆರೆಯ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಶೇಕಡವಾರು ಮತದಾನ ಹೆಚ್ಚಳವಾಗಲು ಜಾಗೃತಿ ಹೊಂದಬೇಕು. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಕೂಲಿ ಕಾರ್ಮಿಕರು ಆರೋಗ್ಯ ಪೌಷ್ಠಿಕಾಂಶವುಳ್ಳ ಕಡೆ ಗಮನಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು ಹಾಗೂ ಚಿಗುರು ಕಲಾ ತಂಡದಿಂದ ಮತದಾನ ಜಾಗೃತಿ ಬೀದಿ ನಾಟಕ ಪ್ರದರ್ಶಿಸಲಾಯಿತು.
ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕ ಪ್ರಮೋದ್, ತಾಪಂ ಇಒ ಕೆ.ಎಸ್.ಮಲ್ಲನಗೌಡ, ಪಿಡಿಒ ಶ್ರೀಶೈಲಗೌಡ, ಆರೋಗ್ಯ ಇಲಾಖೆಯ ವೈದ್ಯರಾದ ಡಾ.ಅರುಣ್, ಡಾ.ರೇವಣಸಿದ್ದಪ್ಪ, ಡಾ.ಸುಭಾಶ್ ಸೇರಿದಂತೆ ತಾಪಂ, ಗ್ರಾಪಂ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಹಾಗೂ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
------
ಮತದಾನ ಜಾಗೃತಿ ಅಂಗವಾಗಿ ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ
ಇಡೀ ರಾಜ್ಯದಲ್ಲಿಯೇ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆ
ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಕರೆ
ಬಳ್ಳಾರಿ,ಏ.30(ಕರ್ನಾಟಕ ವಾರ್ತೆ):
ಪ್ರಜಾಪ್ರಭುತ್ವ ಸುಭದ್ರಗೊಳಿಸಲು ಮತದಾನ ಅತ್ಯಂತ ಅವಶ್ಯಕವಾಗಿದ್ದು, ಮೇ 10 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಮತ್ತು ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ನಗರದ ಮೋತಿ ವೃತ್ತದ ಬಳಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡೆ, ಮತಗಟ್ಟೆಯ ಕಡೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಅಂದಾಜು ಶೇ.75 ರಷ್ಟು ಪ್ರಮಾಣ ಮತದಾನವಾಗಿತ್ತು. ಈ ಬಾರಿ ಶೇ.100 ರಷ್ಟು ಮತದಾನ ಹೊಂದಲು ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ತಿಳಿಸಿದರು.
ಮತದಾನ ದಿನದಂದು ಬಿಸಿಲಿನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸಲು ಮತಗಟ್ಟೆ ಕೇಂದ್ರಗಳಲ್ಲಿ ಶ್ಯಾಮಿಯಾನ ವ್ಯವಸ್ಥೆ, ಸಾರ್ವಜನಿಕರಿಗೆ ವಿಶ್ರಮಿಸಲು ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಮತಗಟ್ಟೆ ಕೇಂದ್ರಗಳು ಜನರನ್ನು ಆಕರ್ಷಣೆಗೊಳ್ಳುವಂತೆ ಸಿದ್ಧಗೊಂಡಿವೆ ಎಂದು ತಿಳಿಸಿದರು.
*ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆ:* ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 38,866 ಜನ ಯುವ ಮತದಾರರು ನೊಂದಾಯಿಸಿಕೊಂಡಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆ ಬಳ್ಳಾರಿ ಜಿಲ್ಲೆಗೆ ಲಭಿಸುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹೇಳಿದರು. ನೊಂದಣಿಗೆ ಸಹಭಾಗಿತ್ವದಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಮತದಾನ ಒಂದು ಜವಾಬ್ದಾರಿಯುತ ಹಕ್ಕಾಗಿದ್ದು, ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಎಲ್ಲರೂ ಮತದಾನ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
*ಮತದಾರರ ದಿನದ ಪ್ರತಿಜ್ಞೆ ಸ್ವೀಕಾರ:* ಮತದಾನ ಜಾಗೃತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾμÉ ಅಥವಾ ಯಾವುದೇ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆ ಎಂಬುದಾಗಿ ಪ್ರತಿಜ್ಷಾ ವಿಧಿ ಸ್ವೀಕರಿಸಲಾಯಿತು.
*ರಾರಾಜಿಸಿದ ಫಲಕಗಳು:* ಪ್ರಜಾಪ್ರಭುತ್ವ ನಮ್ಮಿಂದ, ಮತ ನೀಡಿ-ಹೆಮ್ಮೆಯಿಂದ ಮತದಾನ ಒಂದು ಶಕ್ತಿ. ಒಂದು ಮತ-ನಿಮ್ಮ ಹಕ್ಕು, ನಿಮ್ಮ ಧ್ವನಿ, ನಿಮ್ಮ ಕರ್ತವ್ಯ- ತಪ್ಪದೇ ಮತ ನೀಡಿ. ಮತದಾನ ನಮಗಿರುವ ಅಧಿಕಾರಿ ಅದನ್ನು ವ್ಯರ್ಥ ಮಾಡುವುದು ಬೇಡ. ಮತದಾನದಿಂದಲೇ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಮತದಾನದಿಂದಲೇ ನಿಮ್ಮ ಸರ್ಕಾರ ರಚನೆಯಾಗುತ್ತದೆ. ಯಾವುದೇ ಮತದಾರರ ಮತದಾನದಿಂದ ಹೊರಗುಳಿಯಬಾರದು, ಓದು ವ್ಯಕ್ತಿತ್ವನ್ನು ರೂಪಿಸುತ್ತದೆ ಮತದಾನ ದೇಶವನ್ನು ರೂಪಿಸುತ್ತದೆ. ತಪ್ಪದೇ ಮತದಾನ ಮಾಡಿ, ನಾನು ಓಟ್ ಮಾಡುತ್ತೇವೆ. ನೀವು ತಪ್ಪದೇ ಓಟ್ ಮಾಡಿ ಎಂಬ ಮಾಹಿತಿ ಫಲಕಗಳನ್ನು ಶಾಲಾ-ಕಾಲೇಜು ಮಕ್ಕಳು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್‍ಕುಮಾರ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್, ಪೆÇ್ರಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.
*ಮತದಾನ ಜಾಗೃತಿ ಜಾಥಾ:* ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ ಅಂಗವಾಗಿ ನಗರದ ಎಸ್.ಪಿ ಸರ್ಕಲ್ ಬಳಿ ಮತದಾನ ಜಾಗೃತಿ ಜಾಥಾ ಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಚಾಲನೆ ನೀಡಿದರು. ಜಾಥಾವು ಜಿಲ್ಲಾ ಮಕ್ಕಳ ಆಸ್ಪತ್ರೆ ಮೂಲಕ ಎಪಿಎಂಸಿ, ರೇಡಿಯೋ ಪಾರ್ಕ್, 2 ನೇ ರೈಲ್ವೇ ಗೇಟ್‍ನಿಂದ ಮೋತಿ ಬಳಿ ಅಂತ್ಯಗೊಂಡಿತು.
*ಆರೋಗ್ಯ ಇಲಾಖೆಯಿಂದ ಮತದಾನ ಜಾಗೃತಿ;* ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಅಂಗವಾಗಿ ಜಾಥಾವು ಹಮ್ಮಿಕೊಂಡಿತ್ತು. ಜಾಥಾವು ಡೊಳ್ಳು ಕುಣಿತ ಮೂಲಕ ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಸಂಗಮ್ ವೃತ್ತದ ಮೂಲಕ ಗಡಗಿ ಚೆನ್ನಪ್ಪ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೋತಿ ವೃತ್ತದ ಬಳಿ ತಲುಪಿತು.
ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.
--------
ಶನಿವಾರ, ಏಪ್ರಿಲ್ 29, 2023
ವಿಧಾನಸಭೆ ಸಾರ್ವತ್ರಿಕ ಚುನಾವಣೆ
ವಿಶೇಷ ಮತದಾನ ವ್ಯವಸ್ಥೆಯಲ್ಲಿ 250 ಜನ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ: ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ):
ಚುನಾವಣೆ ಆಯೋಗವು 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ ಮತದಾನ ವ್ಯವಸ್ಥೆ ಕಲ್ಪಿಸಿದ್ದು, ಜಿಲ್ಲೆಯಲ್ಲಿ 12ಡಿ ಫಾರಂ ಅಡಿ ನೊಂದಾಯಿಸಿಕೊಂಡಿದ್ದ 277 ಮತದಾರರ ಪೈಕಿ ಶನಿವಾರದಂದು, 250 ಮತದಾರರು ತಮ್ಮ ಮತವನ್ನು ಮನೆಯಿಂದಲೇ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
*ಮನೆಯಿಂದಲೇ ಮತದಾನ ಮಾಡಿದ ವಿಕಲಚೇತನ ಮತ್ತು 80 ವರ್ಷ ಮೇಲ್ಪಟ್ಟ ಮತದಾರರ ಅಂಕಿ-ಅಂಶ:*
ಕಂಪ್ಲಿ ವಿಧಾನಸಭಾ ಕ್ಷೇತ್ರ: 91-ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 54 ಜನ ಮತದಾರರ ಪೈಕಿ 46 ಜನ ಮತದಾರರು ಮತದಾನ ಮಾಡಿದ್ದಾರೆ ಮತ್ತು 10 ಜನ ವಿಶೇಷಚೇತನರು ನೊಂದಾಯಿಸಿಕೊಂಡಿದ್ದ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 64 ಜನ ಮತದಾರರಲ್ಲಿ 56 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಗೊಂಡಿದ್ದ 80 ವರ್ಷ ಮೇಲ್ಪಟ್ಟವರ ಪೈಕಿ 5 ಜನ ಸಾವನ್ನಪ್ಪಿದ್ದು, 3 ಜನ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ: 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 12 ಮತದಾರರ ಪೈಕಿ 10 ಜನ ಮತದಾನ ಮಾಡಿದ್ದು, 4 ವಿಶೇಷ ಚೇತನರಲ್ಲಿ 4 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 16 ಜನ ಮತದಾರರಲ್ಲಿ 12 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಯಾಗಿದ್ದ 80 ವರ್ಷ ಮೇಲ್ಪಟ್ಟ ಇಬ್ಬರು ಸಾವನ್ನಪ್ಪಿರುತ್ತಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 3 ಮತದಾರರ ಪೈಕಿ 3 ಜನ ಮತದಾನ ಮಾಡಿದ್ದು, ಒಬ್ಬ ವಿಶೇಷ ಚೇತನರು ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 4 ಜನ ಮತದಾರರಲ್ಲಿ 4 ಜನ ಮತದಾನ ಮಾಡಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 147 ಮತದಾರರ ಪೈಕಿ 132 ಜನ ಮತದಾನ ಮಾಡಿದ್ದು, 11 ವಿಶೇಷ ಚೇತನ ಮತದಾರರಲ್ಲಿ 11 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 158 ಜನ ಮತದಾರರಲ್ಲಿ 143 ಜನ ಮತದಾನ ಮಾಡಿದ್ದಾರೆ. ಅದರಲ್ಲಿ ನೊಂದಣಿಯಾಗಿದ್ದ 80 ವರ್ಷ ಮೇಲ್ಪಟ್ಟ 15 ಜನ ಮತದಾರರಲ್ಲಿ 4 ಜನ ಮೃತರಾಗಿದ್ದು, 6 ಜನ ಆಸ್ಪತ್ರೆ ದಾಖಲಾಗಿದ್ದಾರೆ, 4 ಜನ ಸ್ಥಳಾಂತರ ಹಾಗೂ ಒಬ್ಬರು ನಾಳೆ ಮತದಾನ ಮಾಡಲಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ: 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 25 ಮತದಾರರ ಪೈಕಿ 23 ಜನ ಮತದಾನ ಮಾಡಿದ್ದು, 10 ವಿಶೇಷ ಚೇತನ ಮತದಾರರಲ್ಲಿ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 35 ಜನ ಮತದಾರರಲ್ಲಿ 33 ಜನ ಮತದಾನ ಮಾಡಿದ್ದಾರೆ. ಅದರಲ್ಲಿ 80 ವರ್ಷ ಮೇಲ್ಪಟ್ಟ 2 ಮತದಾರರು ಮೃತರಾಗಿದ್ದಾರೆ.
80 ವರ್ಷ ಮೇಲ್ಪಟ್ಟ 241 ಮತದಾರರ ಪೈಕಿ 214 ಜನ ಮತದಾನ ಮಾಡಿದ್ದಾರೆ. 36 ವಿಶೇಷಚೇತನ ಮತದಾರರಲ್ಲಿ 36 ಜನ ಮತದಾನ ಮಾಡಿದ್ದು, ಒಟ್ಟು 277 ಮತದಾರರಲ್ಲಿ 250 ಜನ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 12 ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸುವರು. ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುತ್ತದೆ. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು ರೂಟ್ ಮ್ಯಾಪ್ ಹಾಗೂ ನಿಗದಿತ ಸಮಯ ಹಾಗೂ ದಿನಾಂಕವನ್ನು ನೀಡಿರುತ್ತಾರೆ. ಅ ಸಮಯದಲ್ಲಿ ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‍ನಲ್ಲಿ ಪಡೆಯಲಾಗುತ್ತದೆ. ತಂಡದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ಪೋಲಿಂಗ್ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.
--------
ತೀವ್ರ ಹೃದಯಾಘಾತದಿಂದ ಆರೋಗ್ಯ ಸಿಬ್ಬಂದಿ ಯು.ವೀರರತ್ನ ಮರಣ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗದ ಜಿಲ್ಲಾ ಮಲೇರಿಯ ನಿರ್ಮೂಲನಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿರುಗುಪ್ಪದ ಡಿ-ಗ್ರೂಪ್ ಸಿಬ್ಬಂದಿ ಯು.ವೀರರತ್ನ(31 ವರ್ಷ) ಅವರು ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ.
ಏ.29 ರಂದು ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದೊಂದಿಗೆ ಮತದಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾವು ಜಿಲ್ಲಾ ಆಸ್ಪತ್ರೆ ಆವರಣದಿಂದ ಬೆಳಿಗ್ಗೆ 9.15 ಕ್ಕೆ ಆರಂಭವಾಗಿ 10.30 ಕ್ಕೆ ಅಂತ್ಯವಾಗಿರುತ್ತದೆ. ಜಿಲ್ಲಾ ಆಸ್ಪತ್ರೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿ ಪುನಃ ಜಿಲ್ಲಾ ಆಸ್ಪತ್ರೆಗೆ ಮರಳಿ ಬಂದಿದ್ದು, ಎಲ್ಲರಿಗೂ ಜ್ಯೂಸ್ ಮತ್ತು ಕೆಎಂಎಫ್‍ನಿಂದ ತರಿಸಲ್ಪಟ್ಟ ಸುವಾಸಿತ ಹಾಲನ್ನು ಒದಗಿಸಲಾಗಿದ್ದು, ನಂತರ ಎಲ್ಲರೂ ಅವರವರÀ ಕರ್ತವ್ಯಕ್ಕೆ ಪುನಃ ತೆರಳಿರುತ್ತಾರೆ.
ಯು.ವೀರರತ್ನಾ ಅವರು ಎಂದಿನಂತೆ ಸಿರಗುಪ್ಪದಿಂದ ಆಗಮಿಸಿದ್ದು ಜಾಥಾ ಆರಂಭವಾಗುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯ ಗೇಟ್‍ವರೆಗೆ ಆಗಮಿಸಿ ದೈನಂದಿನ ಕಾರ್ಯದ ಹಿನ್ನಲೆ ಕಚೇರಿಗೆ ವಾಪಾಸ್ಸು ಹೋಗಿರುತ್ತಾರೆ. ಜಾಥಾ ಸಂಪೂರ್ಣವಾಗುವವರೆಗೆ ಜಾಥಾದಲ್ಲಿ ಭಾಗಿಯಾಗಿರುವುದಿಲ್ಲ ಮತ್ತು ಬಿಸಿಲಿನ ಝಳಕ್ಕೆ ಈಡಾಗುವ ಯಾವುದೇ ಘಟನೆ ಸಂಭವಿಸಿರುವುದಿಲ್ಲ.
ಅಂದು ಸರಿಸುಮಾರು ಮಧ್ಯಾಹ್ನ 12.20 ಕ್ಕೆ ಸಿಬ್ಬಂದಿಯವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಎಲ್ಲ ಸಿಬ್ಬಂದಿ ಆರೈಕೆ ಮಾಡುತ್ತಾ ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ತಕ್ಷಣವೇ ತಜ್ಞ ವೈದ್ಯರು ತುರ್ತು ಚಿಕಿತ್ಸೆಯ ಎಲ್ಲ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೂ ಯು.ವೀರರತ್ನಾ ಮರಣ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಮೇಲಾಧಿಕಾರಿಗಳು ಮತ್ತು ಸಹೋದ್ಯೊಗಿಗಳು ಉಪಸ್ಥಿತರಿದ್ದರು. ನಿಯಮಾನುಸಾರ ಪೆÇಲೀಸ್ ಮುಖಾಂತರ ವಿಮ್ಸ್‍ಗೆ ಕಳುಹಿಸಿ ಶವ ಪರೀಕ್ಷೆ ಮಾಡಿಸಿ ತದನಂತರ ಇಲಾಖೆ ಅಂಬ್ಯುಲೆನ್ಸ್ ಮೂಲಕವೇ ಸ್ವಂತ ಊರು ಸಿರುಗುಪ್ಪಕ್ಕೆ ಕುಟುಂಬದ ಸದಸ್ಯರು ಮತ್ತು ಇಲಾಖೆಯ ಸಿಬ್ಬಂದಿಯೊಂದಿಗೆ ಕಳುಹಿಸಿ ಕೊಡಲಾಗಿದೆ.
ಶವ ಪರೀಕ್ಷೆ ಕೈಗೊಂಡ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಖುದ್ದು ಹಾಜರಿದ್ದು, ವಿಮ್ಸ್‍ನ ವಿಧಿ ವಿಜ್ಞಾನ ವಿಭಾಗದ ತಜ್ಞವೈದ್ಯರ ಅಭಿಪ್ರಾಯದಂತೆ ಮೇಲ್ನೋಟಕ್ಕೆ ತೀವ್ರ ಹೃದಯಾಘಾತದಿಂದ ಮರಣಹೊಂದಿದ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಅಂತಿಮ ವರದಿ ಬಂದ ನಂತರ ಖಚಿತ ವರದಿ ಲಭ್ಯವಾಗಲಿದೆ.
ಈ ಹಿನ್ನಲೆಯಲ್ಲಿ ಜಾಥಾದಲ್ಲಿ ಭಾಗವಹಿಸಿ ಬಿಸಿಲಿನ ಝಳಕ್ಕೆ ಅಸ್ವಸ್ಥರಾಗಿ ಕುಸಿದು ಬಿದ್ದು ಮರಣ ಹೊಂದಿದ್ದಾರೆ ಎಂಬುದು ವಾಸ್ತವವಾಗಿ ನಿಜವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜರ್ನಾಧನ ಅವರು ಸ್ಪಷ್ಟನೆ ನೀಡಿದ್ದಾರೆ.
------
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ
ಮತದಾನ ದಿನ, ಮತದಾನದ ಮುನ್ನಾ ದಿನ ಮುದ್ರಣ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳ ಮುದ್ರಣಕ್ಕಾಗಿ ಪೂರ್ವ-ಪ್ರಮಾಣೀಕರಣ ಅನುಮತಿ ಕಡ್ಡಾಯ
ಬಳ್ಳಾರಿ,ಏ.28(ಕರ್ನಾಟಕ ವಾರ್ತೆ):
ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನಕ್ಕೆ 48 ಗಂಟೆಗಳ ಮುನ್ನ ಅಂದರೆ ಮೇ. 09 ಮತ್ತು ಮೇ. 10 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ನೀಡಲು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಚುನಾವಣೆ ನಿಮಿತ್ಯದ ಮತದಾನ ದಿನದ ಪೂರ್ವದ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮಾಧ್ಯಮದಲ್ಲಿ ಯಾವುದೇ ಪ್ರಚೋದಕ, ತಪ್ಪು ದಾರಿಗೆಳೆಯುವ ಅಥವಾ ದ್ವೇಷದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು, ಮತದಾನದ ದಿನ ಹಾಗೂ ಮತದಾನದ ಮುನ್ನಾ ದಿನದಂದು ಮುದ್ರಣ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳ ಮುದ್ರಣಕ್ಕಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇದಕ್ಕಾಗಿ ಸಂಬಂಧಪಟ್ಟ ಅಭ್ಯರ್ಥಿಗಳು ತಾವು ಜಾಹೀರಾತು ನೀಡಲು ಉದ್ದೇಶಿಸಿರುವ ಜಾಹೀರಾತು ಹಾಗೂ ಪತ್ರಿಕೆಗಳ ಹೆಸರುಗಳ ವಿವರದೊಂದಿಗೆ ಅರ್ಜಿಯನ್ನು ಉದ್ದೇಶಿತ ದಿನಾಂಕಕ್ಕಿಂತ ಕನಿಷ್ಟ 02 ದಿನ ಮೊದಲು ಜಿಲ್ಲಾ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಉಳಿದಂತೆ ಚುನಾವಣೆಯ ಎಲ್ಲ ಅವಧಿಯಲ್ಲಿಯೂ ಟಿ.ವಿ., ಕೇಬಲ್, ರೇಡಿಯೋ, ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮ, ಇ-ಪೇಪರ್ ನಲ್ಲಿ ಜಾಹೀರಾತು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ರಾಜಕೀಯ ಜಾಹೀರಾತುಗಳ ವಿಷಯಗಳನ್ನು ಪೂರ್ವ-ಪ್ರಮಾಣೀಕರಿಸದ ಹೊರತು ಮತದಾನದ ದಿನದಂದು ಮತ್ತು ಮತದಾನದ ದಿನದ ಮುನ್ನಾ ದಿನದಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
-------
ಏ.30 ರಂದು ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ):
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಏ.30 ರಂದು ಬೆಳಗ್ಗೆ 08 ಕ್ಕೆ ನಗರದ ಮೋತಿ ಸರ್ಕಲ್ ಬಳಿ ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮತದಾನ ಜಾಗೃತಿ ಜಾಥಾ: ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 07 ಕ್ಕೆ ನಗರದ ಎಸ್.ಪಿ ಸರ್ಕಲ್ ಬಳಿಯಿಂದ ಮತದಾನ ಜಾಗೃತಿ ಜಾಥಾ ನಡೆಯಲಿದ್ದು, ಜಾಥಾವು ಜಿಲ್ಲಾ ಮಕ್ಕಳ ಆಸ್ಪತ್ರೆ ಮೂಲಕ ಎಪಿಎಂಸಿ, ರೇಡಿಯೋ ಪಾರ್ಕ್, 2 ನೇ ರೈಲ್ವೇ ಗೇಟ್‍ನಿಂದ ಮೋತಿ ಬಳಿ ಅಂತ್ಯಗೊಳ್ಳುತ್ತದೆ. ನಂತರ ಮೋತಿ ವೃತ್ತದ ಬಳಿ ಬೆಳಗ್ಗೆ 08 ಕ್ಕೆ ಪ್ರಜಾಪ್ರಭುತ್ವದ ಹಬ್ಬದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ.
--------
ಶಾಲಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ):
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿಬಿಎಸ್‍ಸಿ) ಗಳ 2023-24 ನೇ ಶೈಕ್ಷಣಿಕ ಸಾಲಿಗೆ 6 ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಅಂಜಿನಪ್ಪ ಅವರು ತಿಳಿಸಿದ್ದಾರೆ.
ಅಲ್ಪ ಸಂಖ್ಯಾತರ ಸಮುದಾಯಕ್ಕೆ ಶೇ.75 ಹಾಗೂ ಇತರೆ ಸಮುದಾಯಕ್ಕೆ ಶೇ.25 ರಷ್ಟು ಮೀಸಲಾತಿ ಇರುತ್ತದೆ. ಆಸಕ್ತಿಯುಳ್ಳ ಐದನೇ ತರಗತಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ಸೇವಾಸಿಂಧು ಆನ್‍ಲೈನ್ ಪೋರ್ಟಲ್ https://sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 13 ಆಗಿರುತ್ತದೆ.
*ಶಾಲೆಗಳ ವಿವರ:* ಬಳ್ಳಾರಿ ತಾಲೂಕಿನ ಕೊಳಗಲ್ಲಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ(ಸಿ.ಬಿ.ಎಸ್.ಸಿ)ಯ ಪ್ರಾಂಶುಪಾಲರ ಮೊ.7353346069. ಸಂಡೂರು ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರ ಮೊ.9480933730. ಕಂಪ್ಲಿ ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರ ಮೊ.9113280239.
ಸಂಕ್ಷಿಪ್ತ ಅಧಿಸೂಚನೆ ಮತ್ತು ವಿವರಗಳಿಗಾಗಿ http://dom.karnataka.gov.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದ ದೂ.08392-200125/224 ಅಥವಾ ತಾಲೂಕು ಅಲ್ಪ ಸಂಖ್ಯಾತರ ವಿಸ್ತರಣಾಧಿಕಾರಿಗಳ ಮೊ.8746818180 ಹಾಗೂ ಜಿಲ್ಲೆಯ ಎಲ್ಲಾ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
--------
ಭದ್ರಾದಿಂದ ತುಂಗಾಭದ್ರಾ ಜಲಾಶಯಕ್ಕೆ ನೀರು ಬಿಡುಗಡೆ; ನದಿ ಪಾತ್ರದ ಜನರು ಎಚ್ಚರವಹಿಸುವಂತೆ ಸೂಚನೆ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ):
ಹಾವೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಜಲಾಶಯಕ್ಕೆ ನೀರು ಬಿಡುಗಡೆ ಮಾಡಿರುವ ಕಾರಣ, ನದಿ ಪಾತ್ರದಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕಾ ಸಂಬಂಧಿಸಿದ ಕೆಲಸಗಳನ್ನು ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಹಾವೇರಿ ಜಿಲ್ಲೆ, ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗಲ್ಲದೇ ನದಿ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಈಗಾಗಲೇ ಪ್ರತಿದಿನ ಸಂಜೆ 06 ರಿಂದ ಮೇ 09 ರ ಬೆಳಗ್ಗೆ 06 ರವರೆಗೆ ಪ್ರತಿ ದಿನ 1000 ಕ್ಯೂಸೆಕ್ಸ್‍ನಂತೆ ಒಟ್ಟು 11574 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುತ್ತಿದೆ. ಆದ್ದರಿಂದ ನದಿ ಪಾತ್ರದಲ್ಲಿ ಪ್ರಗಗತಿಯಲ್ಲಿರುವ ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದನ್ನು, ದನಕರುಗಳನ್ನು ಮೇಯಿಸುವುದು ಬಗ್ಗೆ ಎಚ್ಚರಿಕೆ ವಹಿಸಬೇಕು.
ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಹಾಗೂ ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು, ಅನಧಿಕೃತವಾಗಿ ನೀರೆತ್ತುವುದು ಇತ್ಯಾದಿಗಳನ್ನು ನಿμÉೀಧಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಎನ್.ಸುಜಾತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಏ.29(ಕರ್ನಾಟಕ ವಾರ್ತೆ):
ನಗರದ ನಟರಾಜ್ ಟಾಕೀಸ್ ಹತ್ತಿರದ ಪುತ್ತೂರು ಆಸ್ಪತ್ರೆ ರಸ್ತೆಯ ವಿಶಾಲ್ ಹಾರ್ಡ್‍ವೇರ್ ಶಾಪ್ ಮುಂಭಾಗ ಸುಮಾರು 40-45 ವರ್ಷದ ಅನಾಮಧೇಯ ವ್ಯಕ್ತಿಯು ಏ.28 ರಂದು ಬೆಳಗ್ಗೆ 09 ಕ್ಕೆ ಯಾವುದೋ ಖಾಯಿಲೆಯಿಂದ ಬಳಲಿ ಅಸ್ವಸ್ಥನಾಗಿ ಸಾವನ್ನಪ್ಪಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಚಹರೆ ಗುರುತು: ಅಂದಾಜು 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಸುಮಾರು 2 ಇಂಚು ಉದ್ದನೇಯ ಕಪ್ಪು ಕೂದಲು ಇರುತ್ತವೆ.
ನೀಲಿ ಮತ್ತು ಬಿಳಿ ಗೆರೆಯುಳ್ಳ ತುಂಬು ತೋಳಿನ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
--------
ಗುರುವಾರ, ಏಪ್ರಿಲ್ 27, 2023
ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆ
ದಡಾರ-ರುಬೇಲ್ಲಾ ನಿಯಂತ್ರಣಕ್ಕಾಗಿ ತಪ್ಪದೆ ಲಸಿಕೆ ಹಾಕಿಸಲು ಕ್ರಮವಹಿಸಿ: ಜಿಪಂ ಸಿಇಒ ರಾಹುಲ್ ಸಂಕನೂರು
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ಮಗುವಿನ ಜನನದ 09 ತಿಂಗಳು ಪೂರ್ಣಗೊಂಡ ನಂತರ ಮೊದಲಬಾರಿ ಹಾಗೂ 16-24 ತಿಂಗಳ ಅವಧಿಯಲ್ಲಿ ಎರಡನೇಯ ಸಲ ನೀಡುವ ದಡಾರ-ರುಬೆಲ್ಲಾ ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ಬುಧವಾರ, ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಾಬ್ ಸಭಾಂಗಣದಲ್ಲಿ ದಡಾರ-ರುಬೆಲ್ಲಾ ನಿರ್ಮೂಲನಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರುಬೆಲ್ಲಾ ರೋಗಕ್ಕೆ ತುತ್ತಾದ ಗರ್ಭಿಣಿ ಸ್ರೀಯರಲ್ಲಿ ರುಬೆಲ್ಲಾ ರೋಗವು ಮಕ್ಕಳಿಗೆ ಮಾರಕವಾಗುವ ಸಾಧ್ಯತೆಯಿದ್ದು, ಜನನದ ನಂತರ ಮಗುವಿಗೆ ಗ್ಲುಕೋಮ, ಕಣ್ಣಿನಪೊರೆ, ಕಿವುಡುತನದಂತಹ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ವಯಸ್ಸಿಗೆ ಅನುಸಾರವಾಗಿ ನೀಡುವ ದಡಾರ-ರುಬೆಲ್ಲಾ ಸಂಯೋಜಿತ ಲಸಿಕೆಯನ್ನು ಹಾಕಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಬಾಲ್ಯದಲ್ಲಿ ಕಂಡುಬರುವ ರೂಢಿಯಲ್ಲಿ ಅಮ್ಮ, ತಟ್ಟು ಎಂದು ಕರೆಯಲ್ಪಡುವ ದಡಾರವು ಮಕ್ಕಳಲ್ಲಿ ಅಂಗವೈಕಲ್ಯವನ್ನು ಉಂಟು ಮಾಡಬಹುದು ಹಾಗೂ ಬಾಲ್ಯದಲ್ಲಿ ಮಕ್ಕಳ ಮೈಮೇಲೆ ಕಂಡುಬರುವ ಗುಳ್ಳೆಗಳನ್ನು ಬೇಸಿಗೆಯಲ್ಲಿ ಬೆವರುಸಾಲಿ ಎಂಬ ವಾಡಿಕೆಯ ನಿರ್ಲಕ್ಷ್ಯ ಮಾಡದಂತೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳು ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಲ್ಲಿ ಜ್ವರ ಪ್ರಕರಣಗಳು ಕಂಡುಬಂದಾಗ ತಕ್ಷಣವೇ ಮಾಹಿತಿ ನೀಡಿ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್ ಅವರು ಸಭೆಗೆ ರೋಗಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಐಎಮ್‍ಎ, ಐಐಪಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಮತ್ತು ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
-------
ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ
ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳು ಕೈಜೋಡಿಸಿ:
ಜಿಪಂ ಸಿಇಒ ರಾಹುಲ್ ಎಸ್ ಸಂಕನೂರು
ಬಳ್ಳಾರಿ, ಏ.27(ಕರ್ನಾಟಕ ವಾರ್ತೆ):
ಜೀವಕ್ಕೆ ಅಪಾಯ ಒದಗಿಸಬಹುದಾದ ಸೊಳ್ಳೆ ಕಚ್ಚುವಿಕೆಯಿಂದ ಬರುವ ಡೆಂಗ್ಯೂ, ಮಲೇರಿಯಾ, ಚಿಕಿನ್ ಗುನ್ಯಾ ಸೇರಿದಂತೆ ಆನೆಕಾಲು ರೋಗ ಮುಂತಾದವುಗಳನ್ನು ತಡೆಗಟ್ಟಲು ಮಳೆಗಾಲ ಪ್ರಾರಂಭವಾಗುವ ಪೂರ್ವದಲ್ಲಿಯೇ ರೋಗ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳು, ರಸ್ತೆ ಸಾರಿಗೆ ಸಂಸ್ಥೆ, ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಮ್ಮ ಜವಾಬ್ದಾರಿಯನ್ನು ಅರಿತು ಆರೋಗ್ಯ ಇಲಾಖೆಯ ಕೈಗೊಳ್ಳುವ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಮೇಲ್ಛಾವಣೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ, ಅಡಚಣೆ ಉಂಟುಮಾಡುವ ಕಸ, ಕಡ್ಡಿಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೈಗಾರಿಕಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಲಸೆ ಬರುವ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ರೋಗ ಹರಡದಂತೆ ಕ್ರಮ ವಹಿಸಬೇಕು. ಶಾಲೆಗಳು ಆರಂಭವಾದ ನಂತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂಜಾಗ್ರತೆ ಕುರಿತು ಶಾಲಾ ಮಕ್ಕಳಿಗೆ ಹಾಗೂ ಜನತೆಗೆ ಜಾಗೃತಿ ನೀಡಲು ಕ್ರಮ ವಹಿಸಲು ಕ್ರಿಯಾಯೋಜನೆ ರಚಿಸಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್ ಅವರು ರೋಗಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
--------
ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023
ಚುನಾವಾಣಾ ಕರ್ತವ್ಯ ಲೋಪ: ಎಪಿಎಂಸಿ ಬೆರಳಚ್ಚುಗಾರ ಅಮಾನತು
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಪುರ ಬೈಪಾಸ್ ರಸ್ತೆ ವೃತ್ತದಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡಕ್ಕೆ ನಿಯೋಜನೆಗೊಂಡಿದ್ದ ಎಪಿಎಂಸಿಯ ಬೆರಳಚ್ಚುಗಾರ ಎಸ್.ವಿಶ್ವನಾಥ ಗೌಡ ಅವರು ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಅವರು ಆದೇಶ ಮಾಡಿದ್ದಾರೆ.
ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಸಂಬಂಧಿಸಿದಂತೆ, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಅನುμÁ್ಠನಗೊಳಿಸುವುದು ಅವಶ್ಯವಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿಲಾಗಿದೆ.
ಎಸ್‍ಎಸ್‍ಟಿ ತಂಡಕ್ಕೆ ನಿಯೋಜಿತಗೊಂಡಿದ್ದ ಎಪಿಎಂಸಿ ಬೆರಳಚ್ಚುಗಾರ ಎಸ್.ವಿಶ್ವನಾಥ.ಎಸ್ ಅವರು ಚುನಾವಣಾ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಅನಧಿಕೃತವಾಗಿ ಗೈರು ಹಾಜರಾಗುವುದು ಮತ್ತು ಪ್ರತಿದಿನ ಚುನಾವಣೆ ಶಾಖೆಗೆ ವರದಿ ನೀಡದೇ ಇರುವುದು ಕಂಡುಬಂದಿರುತ್ತದೆ.
ನೌಕರರಿಗೆ ಚುನಾವಣೆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಂತೆ ವೀಡಿಯೋ ಸಂವಾದದ ಮೂಲಕ ಹಾಗೂ ಸಭೆಗಳ ಮೂಲಕ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗಿತ್ತು. ಆದರೆ ವಿಶ್ವನಾಥ ಗೌಡ.ಎಸ್ ಅವರು ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸುವಲ್ಲಿ ಬೇಜವಾಬ್ದಾರಿಯನ್ನು ತೋರಿಸಿರುತ್ತಾರೆ.
ಆದ್ದರಿಂದ ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 ನಿಯಮದಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10(1) ರಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ 1958ರ ನಿಯಮ 98 ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
-------
ಏ.28ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ವ್ಯಾಪ್ತಿಯ 220/11 ಕೆ.ವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಬ್ಯಾಂಕ್-2 ಫೀಡರ್‍ಗಳಾದ ಎಫ್-34, ಎಫ್-36, ಎಫ್-40, ಎಫ್-75, ಎಫ್-76, ಎಫ್-77 ಮತ್ತು ಎಫ್-39 ಫೀಡರ್‍ಗಳ ಸಿ.ಟಿಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಏ.28 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ವಿನಾಯಕ ನಗರ, ಕ್ಯಾಂಟೋನ್‍ಮೆಂಟ್, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್‍ಬಜಾರ್ ಮೇನ್ ರೋಡ್, ಟೈಲರ್ ಬೀದಿ, ಕುವೆಂಪು ನಗರ, ಜಯನಗರ, ಚಂದ್ರ ಕಾಲೋನಿ, ರಾಮಂಜನೇಯ ನಗರ, ಸಿ.ಎಮ್.ಸಿ ಕಾಲೋನಿ, ಎಕ್ಸ್ ಸರ್ವೀಸ್‍ಮೆನ್ ಕಾಲೋನಿ, ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ಟ್ರಾಮಾಕೇರ್ ಸೆಂಟರ್, ವಿಮ್ಸ್ ಆಸ್ಪತ್ರೆ, ಜಲ ಶುದ್ಧೀಕರಣ ಕೇಂದ್ರ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳು ಹಾಗೂ ಕೊಳಗಲ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
-----
ಸಿರುಗುಪ್ಪ: ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ಸಿರುಗುಪ್ಪ ತೋಟಗಾರಿಕೆ ಇಲಾಖೆಯ 2023-24 ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಫಲಾನುಭವಿ ಆಧಾರಿತ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಣ್ಣ, ಅತಿ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆಯ ಸೌಲಭ್ಯಗಳಾದ ಕಂದಕ ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ, ಮಾವು ಪುನಃಶ್ಚೇತನ, ತೆಂಗು ಪುನಃಶ್ಚೇತನ, ತಾಳೆ ಬೆಳೆ ಪುನಃಶ್ಚೇತನ, ಬಾಳೆ, ಅಂಜೂರ, ತಾಳೆಬೆಳೆ, ದಾಳಿಂಬೆ, ಸಪೋಟ, ಮಾವು, ನುಗ್ಗೆ, ತೆಂಗು, ಪಪ್ಪಾಯ, ಕರಿಬೇವು, ಪೇರಲ, ಗುಲಾಭಿ ಹೂ ಮತ್ತು ಮಲ್ಲಿಗೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಹಾಗೂ ಕೊಳವೆ ಬಾಯಿ ಮರುಪೂರ್ಣ ಘಟಕ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು.
ನೀರಾವರಿ ಸೌಕರ್ಯವುಳ್ಳ ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಂಡಲ್ಲಿ ನರೇಗಾ ಯೋಜನೆಯ ಅನುದಾನ ಬಳಸಿ ಕೂಲಿ ಮೊತ್ತವನ್ನು ಆನ್‍ಲೈನ್ ಮೂಲಕ ಪಾವತಿ ಮಾಡಲಾಗುವ ವ್ಯವಸ್ಥೆ ಇದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯನ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಲು ಇತರೆ ವರ್ಗದ ರೈತರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ಸಿರುಗುಪ್ಪ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.08396-222066 ಗೆ ಸಂಪರ್ಕಿಸಬಹುದು ಎಂದು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ್ ಅವರು ತಿಳಿಸಿದ್ದಾರೆ.
-------
ಜಿಲ್ಲಾಡಳಿತದಿಂದ ಮಹರ್ಷಿ ಭಗೀರಥ ಜಯಂತಿ ಆಚರಣೆ
ಬಳ್ಳಾರಿ,ಏ.25(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಾಂಸ್ಕøತಿಕ ಸಮುಚ್ಚಯ ಸಭಾಂಗಣದಲ್ಲಿ ಗುರುವಾರ ಮಹರ್ಷಿ ಭಗೀರಥ ಜಯಂತಿಯನ್ನು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್.ಸುರೇಶಬಾಬು ಅವರು, ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಹಿರಿಯ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು.
-----
ಆರೋಗ್ಯ ಇಲಾಖೆಯಿಂದ ಮತದಾನ ಜಾಗೃತಿ
ಸಧೃಡ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಯಾವುದೇ ಆಮಿಷಕ್ಕೊಳಗಾಗದೇ ಮತ ಚಲಾಯಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆÀಯ ಘನತೆಯನ್ನು ಎತ್ತಿ ಹಿಡಿಯಲು, ಮತದಾರರು ಆಕರ್ಷಕ ವಸ್ತುಗಳು, ಹಣ, ಉಡುಗೊರೆ ಮುಂತಾದವುಗಳಿಗೆ ಮರಳಾಗದೇ ನೈತಿಕ ಮತದಾನ ಮಾಡಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ತರಬೇತಿ ಕೇಂದ್ರ, ಶುಶ್ರೂಣಾಧಿಕಾರಿಗಳ ತರಬೇತಿ ಕೇಂದ್ರ, ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಗುರುವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಮೂಡಿಸುವ ಜಾಥಾ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಧೃಡ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅತ್ಯಂತ ಅವಶ್ಯಕವಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಮತದ ಮೌಲ್ಯವನ್ನು ಅರಿತು, ತಪ್ಪದೇ ಮತ ಚಲಾಯಿಸಬೇಕು. ಚುನಾವಣೆ ಸಂದರ್ಭದಲ್ಲಿ ತೋರಲಾಗುವ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ತಮಗೆ ಸೂಕ್ತವೆನಿಸುವ ಅಭ್ಯರ್ಥಿಗೆ ನಿರ್ಭೀತಿಯಿಂದ ನೈತಿಕ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಸ್ವೀಪ್ ಸಮಿತಿಯ ಬಸವರಾಜ್ ಹಿರೇಮಠ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಡಾ.ಹನುಮಂತಪ್ಪ, ಡಾ.ರಾಜಶೇಖರ್, ಡಾ.ಕಾಶಿಪ್ರಸಾದ್, ಡಾ.ಸುರೇಖ, ಡಾ.ಶಗುಪ್ತಾ ಶಾಹಿನ್, ವಾಹನ ಅಭಿಯಂತರರು ವಿಜಯಕುಮಾರ್, ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಅವರು ಮತದಾನ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.
ಜಾಥಾದಲ್ಲಿ ಆರೋಗ್ಯ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಕಾರಿಗಳು ಮತದಾನ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಫಲಕಗಳನ್ನು ಪ್ರದರ್ಶಿಸಿದರು.
ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಆವರಣದಿಂದ ಆರಂಭವಾಗಿ ಸಂಗಮ್ ವೃತ್ತ, ಕೆ.ಸಿ ರಸ್ತೆ, ನಗರ ಬಸ್ ನಿಲ್ದಾಣ, ಜಿಲ್ಲಾಧಿಕಾರಿಗಳ ಕಚೇರಿ, ರೈಲ್ವೇ ನಿಲ್ದಾಣ, ಗಡಿಗಿ ಚೆನ್ನಪ್ಪ ವೃತ್ತ, ಸಂಗಮ್ ವೃತ್ತದ ಮೂಲಕ ಮರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಆವರಣಕ್ಕೆ ಮುಕ್ತಾಯಗೊಂಡಿತು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


















































