ಗುರುವಾರ, ಏಪ್ರಿಲ್ 27, 2023
ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆ
ದಡಾರ-ರುಬೇಲ್ಲಾ ನಿಯಂತ್ರಣಕ್ಕಾಗಿ ತಪ್ಪದೆ ಲಸಿಕೆ ಹಾಕಿಸಲು ಕ್ರಮವಹಿಸಿ: ಜಿಪಂ ಸಿಇಒ ರಾಹುಲ್ ಸಂಕನೂರು
ಬಳ್ಳಾರಿ,ಏ.27(ಕರ್ನಾಟಕ ವಾರ್ತೆ):
ಮಗುವಿನ ಜನನದ 09 ತಿಂಗಳು ಪೂರ್ಣಗೊಂಡ ನಂತರ ಮೊದಲಬಾರಿ ಹಾಗೂ 16-24 ತಿಂಗಳ ಅವಧಿಯಲ್ಲಿ ಎರಡನೇಯ ಸಲ ನೀಡುವ ದಡಾರ-ರುಬೆಲ್ಲಾ ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು.
ಬುಧವಾರ, ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಾಬ್ ಸಭಾಂಗಣದಲ್ಲಿ ದಡಾರ-ರುಬೆಲ್ಲಾ ನಿರ್ಮೂಲನಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರುಬೆಲ್ಲಾ ರೋಗಕ್ಕೆ ತುತ್ತಾದ ಗರ್ಭಿಣಿ ಸ್ರೀಯರಲ್ಲಿ ರುಬೆಲ್ಲಾ ರೋಗವು ಮಕ್ಕಳಿಗೆ ಮಾರಕವಾಗುವ ಸಾಧ್ಯತೆಯಿದ್ದು, ಜನನದ ನಂತರ ಮಗುವಿಗೆ ಗ್ಲುಕೋಮ, ಕಣ್ಣಿನಪೊರೆ, ಕಿವುಡುತನದಂತಹ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ವಯಸ್ಸಿಗೆ ಅನುಸಾರವಾಗಿ ನೀಡುವ ದಡಾರ-ರುಬೆಲ್ಲಾ ಸಂಯೋಜಿತ ಲಸಿಕೆಯನ್ನು ಹಾಕಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಬಾಲ್ಯದಲ್ಲಿ ಕಂಡುಬರುವ ರೂಢಿಯಲ್ಲಿ ಅಮ್ಮ, ತಟ್ಟು ಎಂದು ಕರೆಯಲ್ಪಡುವ ದಡಾರವು ಮಕ್ಕಳಲ್ಲಿ ಅಂಗವೈಕಲ್ಯವನ್ನು ಉಂಟು ಮಾಡಬಹುದು ಹಾಗೂ ಬಾಲ್ಯದಲ್ಲಿ ಮಕ್ಕಳ ಮೈಮೇಲೆ ಕಂಡುಬರುವ ಗುಳ್ಳೆಗಳನ್ನು ಬೇಸಿಗೆಯಲ್ಲಿ ಬೆವರುಸಾಲಿ ಎಂಬ ವಾಡಿಕೆಯ ನಿರ್ಲಕ್ಷ್ಯ ಮಾಡದಂತೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳು ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಲ್ಲಿ ಜ್ವರ ಪ್ರಕರಣಗಳು ಕಂಡುಬಂದಾಗ ತಕ್ಷಣವೇ ಮಾಹಿತಿ ನೀಡಿ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್ ಅವರು ಸಭೆಗೆ ರೋಗಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಐಎಮ್‍ಎ, ಐಐಪಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಮತ್ತು ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ