ಗುರುವಾರ, ಏಪ್ರಿಲ್ 20, 2023

ಮೋಕಾ ಹೋಬಳಿಯಲ್ಲಿ ಎತ್ತಿನ ಬಂಡಿಗಳ ಮೂಲಕ ಮತದಾನ ಜಾಗೃತಿ ಜಾಥಾ ನಿರ್ಭೀತರಾಗಿ ಮತ ಚಲಾಯಿಸಿ: ತಾಪಂ ಇಒ ಶ್ರೀಧರ್ ಬಾರಕೇರ್ ಬಳ್ಳಾರಿ,ಏ.20(ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 10 ರಂದು ನಡೆಯುವ ಮತದಾನ ದಿನದಂದು ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ, ನಿರ್ಭೀತರಾಗಿ ಮತ ಚಲಾಯಿಸಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಬಾರಕೇರ್ ಅವರು ಹೇಳಿದರು. ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೋಕಾ ಹೋಬಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ, ಹಮ್ಮಿಕೊಂಡಿದ್ದ ಎತ್ತಿನಬಂಡಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಪ್ರಜಾಪ್ರಭುತ್ವ ರೂಪಿಸಲು ಮತದಾನ ಅವಶ್ಯಕವಾಗಿದ್ದು, ತಪ್ಪದೇ ಎಲ್ಲರೂ ಮತದಾನ ಮಾಡಬೇಕು ಎಂದರು. ಮತದಾನ ಜಾಗೃತಿ ಮೂಡಿಸಲು ಭಾಗವಹಿಸಿದ್ದ ಎತ್ತಿನ ಬಂಡಿಗಳಿಗೆ ಹೂ, ತಳಿರು ತೋರಣ, ಬಣ್ಣದ ಬಲೂನ್‍ಗಳ ಮೂಲಕ ಸಿಂಗಾರಗೊಳಿಸಲಾಗಿತ್ತು. ಜಾಥಾದಲ್ಲಿ ಮತದಾನ ಅರಿವು ಮೂಡಿಸುವ ಮಾಹಿತಿ ಫಲಕಗಳು ಇದ್ದವು. ಮತದಾನ ಜಾಗೃತಿ ಮೂಡಿಸುವ ಎತ್ತಿನ ಬಂಡಿ ಜಾಥಾವು ಮಲ್ಲೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭವಾಗಿ ರಾಜ ಮಾರ್ಗ ಮೂಲಕ ಮಾರೆಮ್ಮ ದೇವಿ ದೇವಾಸ್ಥಾನದ ಬಸ್ ನಿಲ್ದಾಣದವರೆಗೆ ಸಾಗಿತು. ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾಂತ್‍ರಾಜ್ ಅವರು ಮೋಕಾ ಗ್ರಾಮದ ಬಸ್ ಸ್ಟ್ಯಾಂಡ್ ಬಳಿ ಜನರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮೊಹಮ್ಮದ್ ಗೌಸ್.ಆರ್ ಸೇರಿದಂತೆ ತಾಲ್ಲೂಕು ಪಂಚಾಯತಿ ಸಿಬ್ಬಂದಿ ವರ್ಗ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮದ ರೈತರು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ