ಶನಿವಾರ, ಏಪ್ರಿಲ್ 29, 2023

ತೀವ್ರ ಹೃದಯಾಘಾತದಿಂದ ಆರೋಗ್ಯ ಸಿಬ್ಬಂದಿ ಯು.ವೀರರತ್ನ ಮರಣ ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗದ ಜಿಲ್ಲಾ ಮಲೇರಿಯ ನಿರ್ಮೂಲನಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿರುಗುಪ್ಪದ ಡಿ-ಗ್ರೂಪ್ ಸಿಬ್ಬಂದಿ ಯು.ವೀರರತ್ನ(31 ವರ್ಷ) ಅವರು ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ. ಏ.29 ರಂದು ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದೊಂದಿಗೆ ಮತದಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾವು ಜಿಲ್ಲಾ ಆಸ್ಪತ್ರೆ ಆವರಣದಿಂದ ಬೆಳಿಗ್ಗೆ 9.15 ಕ್ಕೆ ಆರಂಭವಾಗಿ 10.30 ಕ್ಕೆ ಅಂತ್ಯವಾಗಿರುತ್ತದೆ. ಜಿಲ್ಲಾ ಆಸ್ಪತ್ರೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿ ಪುನಃ ಜಿಲ್ಲಾ ಆಸ್ಪತ್ರೆಗೆ ಮರಳಿ ಬಂದಿದ್ದು, ಎಲ್ಲರಿಗೂ ಜ್ಯೂಸ್ ಮತ್ತು ಕೆಎಂಎಫ್‍ನಿಂದ ತರಿಸಲ್ಪಟ್ಟ ಸುವಾಸಿತ ಹಾಲನ್ನು ಒದಗಿಸಲಾಗಿದ್ದು, ನಂತರ ಎಲ್ಲರೂ ಅವರವರÀ ಕರ್ತವ್ಯಕ್ಕೆ ಪುನಃ ತೆರಳಿರುತ್ತಾರೆ. ಯು.ವೀರರತ್ನಾ ಅವರು ಎಂದಿನಂತೆ ಸಿರಗುಪ್ಪದಿಂದ ಆಗಮಿಸಿದ್ದು ಜಾಥಾ ಆರಂಭವಾಗುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯ ಗೇಟ್‍ವರೆಗೆ ಆಗಮಿಸಿ ದೈನಂದಿನ ಕಾರ್ಯದ ಹಿನ್ನಲೆ ಕಚೇರಿಗೆ ವಾಪಾಸ್ಸು ಹೋಗಿರುತ್ತಾರೆ. ಜಾಥಾ ಸಂಪೂರ್ಣವಾಗುವವರೆಗೆ ಜಾಥಾದಲ್ಲಿ ಭಾಗಿಯಾಗಿರುವುದಿಲ್ಲ ಮತ್ತು ಬಿಸಿಲಿನ ಝಳಕ್ಕೆ ಈಡಾಗುವ ಯಾವುದೇ ಘಟನೆ ಸಂಭವಿಸಿರುವುದಿಲ್ಲ. ಅಂದು ಸರಿಸುಮಾರು ಮಧ್ಯಾಹ್ನ 12.20 ಕ್ಕೆ ಸಿಬ್ಬಂದಿಯವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಎಲ್ಲ ಸಿಬ್ಬಂದಿ ಆರೈಕೆ ಮಾಡುತ್ತಾ ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ತಕ್ಷಣವೇ ತಜ್ಞ ವೈದ್ಯರು ತುರ್ತು ಚಿಕಿತ್ಸೆಯ ಎಲ್ಲ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೂ ಯು.ವೀರರತ್ನಾ ಮರಣ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಮೇಲಾಧಿಕಾರಿಗಳು ಮತ್ತು ಸಹೋದ್ಯೊಗಿಗಳು ಉಪಸ್ಥಿತರಿದ್ದರು. ನಿಯಮಾನುಸಾರ ಪೆÇಲೀಸ್ ಮುಖಾಂತರ ವಿಮ್ಸ್‍ಗೆ ಕಳುಹಿಸಿ ಶವ ಪರೀಕ್ಷೆ ಮಾಡಿಸಿ ತದನಂತರ ಇಲಾಖೆ ಅಂಬ್ಯುಲೆನ್ಸ್ ಮೂಲಕವೇ ಸ್ವಂತ ಊರು ಸಿರುಗುಪ್ಪಕ್ಕೆ ಕುಟುಂಬದ ಸದಸ್ಯರು ಮತ್ತು ಇಲಾಖೆಯ ಸಿಬ್ಬಂದಿಯೊಂದಿಗೆ ಕಳುಹಿಸಿ ಕೊಡಲಾಗಿದೆ. ಶವ ಪರೀಕ್ಷೆ ಕೈಗೊಂಡ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಖುದ್ದು ಹಾಜರಿದ್ದು, ವಿಮ್ಸ್‍ನ ವಿಧಿ ವಿಜ್ಞಾನ ವಿಭಾಗದ ತಜ್ಞವೈದ್ಯರ ಅಭಿಪ್ರಾಯದಂತೆ ಮೇಲ್ನೋಟಕ್ಕೆ ತೀವ್ರ ಹೃದಯಾಘಾತದಿಂದ ಮರಣಹೊಂದಿದ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಅಂತಿಮ ವರದಿ ಬಂದ ನಂತರ ಖಚಿತ ವರದಿ ಲಭ್ಯವಾಗಲಿದೆ. ಈ ಹಿನ್ನಲೆಯಲ್ಲಿ ಜಾಥಾದಲ್ಲಿ ಭಾಗವಹಿಸಿ ಬಿಸಿಲಿನ ಝಳಕ್ಕೆ ಅಸ್ವಸ್ಥರಾಗಿ ಕುಸಿದು ಬಿದ್ದು ಮರಣ ಹೊಂದಿದ್ದಾರೆ ಎಂಬುದು ವಾಸ್ತವವಾಗಿ ನಿಜವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜರ್ನಾಧನ ಅವರು ಸ್ಪಷ್ಟನೆ ನೀಡಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ