ಶುಕ್ರವಾರ, ಏಪ್ರಿಲ್ 21, 2023
ಚುನಾವಣಾ ಸಂಬಂಧಿತ ಸಹಾಯವಾಣಿ 1950 ಸಂಖ್ಯೆಗೆ 231 ಕರೆ,
ಸಿ-ವಿಜಲ್‍ಗೆ 73 ದೂರು
ಬಳ್ಳಾರಿ,ಏ.21(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಾಗಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 1950 ಸಂಖ್ಯೆಯ ಸಹಾಯವಾಣಿ ಕೇಂದ್ರ ಮತ್ತು ಸಿ-ವಿಲ್ ಆಪ್ ಮಾನಿಟರಿಂಗ್ ಕೇಂದ್ರ ಒಳಗೊಂಡಂತೆ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 29ರಿಂದ ಏಪ್ರಿಲ್ 20ರವರೆಗೂ 231 ಕರೆ ಮತ್ತು ಸಿ-ವಿಜಿಲ್ ಆಪ್‍ಗೆ ಸಂಬಂಧಿಸಿದಂತೆ 73 ದೂರುಗಳು ಸಲ್ಲಿಕೆಯಾಗಿವೆ.
ಚುನಾವಣಾ ಆಯೋಗವು ಮತದಾರರಿಗೆ ಚುನಾವಣಾ ಮಾಹಿತಿ ನೀಡಲು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಲು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ಅಲ್ಲದೇ, ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಒಟ್ಟು 231 ಕರೆ ಸ್ವೀಕಾರ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ಮುನ್ನವೇ ಆಯೋಗದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವು ಆರಂಭವಾಗಿದೆ. ನೀತಿ ಸಂಹಿತೆ ಜಾರಿಗೆ ಬಂದ ದಿನ ಅಂದರೆ ಮಾರ್ಚ್ 29 ರಿಂದ 1950 ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಗಳ (24*7) ಕಾಲ ಕಾರ್ಯ ನಿರ್ವಹಿಸುತ್ತಿದ್ದು, ಮಾ.29 ರಿಂದ ಏ.20 ರವರೆಗೂ ಮತದಾರರ ಪಟ್ಟಿಗೆ ಹೊಸ ಸೇರ್ಪಡೆ (ನಮೂನೆ-6), ಪಟ್ಟಿಯಿಂದ ಹೆಸರು ತೆಗೆದು ಹಾಕಲು(ನಮೂನೆ-7), ತಿದ್ದುಪಡಿ, ವರ್ಗಾವಣೆ, ಬದಲಿ ಕಾರ್ಡ್, ವಿಕಲ ಚೇತನ ಮತದಾರರಿಗೆ ಸಂಬಂಧಿಸಿದಂತೆ (ನಮೂನೆ-1), ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯ ಸ್ಥಿತಿ ಮಾಹಿತಿ, ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಇಲ್ಲಿಯವರೆಗೆ 231 ಕರೆಗಳನ್ನು ಸ್ವೀಕರಿಸಿ, ಮಾಹಿತಿ ನೀಡಲಾಗಿದೆ.
1950ರ ವಿಶೇಷತೆ: ವಿಧಾನಸಭಾ ಚುನಾವಣೆಗೆ ದೂರುಗಳನ್ನು ಸಂಬಂಧಿಸಿದ ಸ್ವೀಕರಿಸಲು ಎನ್‍ಜಿಆರ್‍ಎಸ್ (NGRS-National Grievances Re-addressable System) ಪೋರ್ಟಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಸ್ವೀಕರಿಸಲಾಗುವ ದೂರುಗಳನ್ನು ಕ್ರೋಢೀಕರಿಸಿ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುವುದು. ಕರೆ ಮಾಡಿದ ಗ್ರಾಹಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲಾಗುತ್ತಿದೆ.
ಸಿ-ವಿಜಿಲ್ ಆಪ್‍ನಲ್ಲಿ 73 ದೂರು ದಾಖಲು: ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 73 ದೂರುಗಳು ಸಿ-ವಿಜಿಲ್ ಆಪ್‍ನಲ್ಲಿ ಸ್ವೀಕೃತಗೊಂಡಿವೆ. ದೂರು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಫ್ಲೈಯಿಂಗ್ ಸÁ್ಕ್ವ್ಯಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ಹಾಗೂ ಮಾಹಿತಿಯನ್ನು ರವಾನಿಸಲಾಗುತ್ತದೆ. ಈ ಮಾಹಿತಿ ಆಧಾರದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಫ್ಲೈಯಿಂಗ್ ಸÁ್ಕ್ವ್ಯಡ್ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಂಡು ಇತ್ಯರ್ಥಪಡಿಸುವರು. ಇದುವರೆಗೆ ಸಲ್ಲಿಕೆಯಾಗಿರುವ ಎಲ್ಲ ದೂರುಗಳನ್ನು ಈಗಾಗಲೆ ವಿಲೇವಾರಿ ಮಾಡಲಾಗಿದೆ.
ಚುನಾವಣಾ ಸಮಯದಲ್ಲಿ ಮತದಾರರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯಲ್ಲಿ ಆಮಿಷ ನೀಡಬಹುದಾದ ಹಣ ವಿತರಣೆ, ಉಡುಗೊರೆಗಳು, ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿ ಇಲ್ಲದ ಪೆÇೀಸ್ಟರ್ ಮತ್ತು ಬ್ಯಾನರ್‍ಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು, ಸಂದೇಶಗಳು, ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿ-ವಿಜಿಲ್ ಆಪ್‍ನಲ್ಲಿ ದೂರು ದಾಖಲಿಸಬಹುದಾಗಿದೆ.
24*7 ಕಾರ್ಯ ನಿರ್ವಹಣೆಗೆ 17 ಜನ ಸಿಬ್ಬಂದಿ ನೇಮಕ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಸಹಾಯವಾಣಿ ಸಂಖ್ಯೆ 1950 ಮತ್ತು ಸಿ-ವಿಜಿಲ್ ಆಪ್ ಮಾನಿಟರಿಂಗ್ ದಿನದ 24 ಗಂಟೆ (24*7) ಕಾಲ ಕಾರ್ಯನಿರ್ವಹಿಸುತ್ತಿದೆ. 1950 ಸಹಾಯವಾಣಿ ಸಂಖ್ಯೆಗೆ ದಿನದ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು 3 ಜನ ಸಿಬ್ಬಂದಿ, ಸಿ-ವಿಜಿಲ್ ಮಾನಿಟರಿಂಗ್ ಗೆ ದಿನದ 4 ಪಾಳಿಯಲ್ಲಿ 4 ಜನ ಸಿಬ್ಬಂದಿ, ಚೆಕ್‍ಪೋಸ್ಟ್ ಮಾನಿಟರ್‍ಗೆ ದಿನದ ಎರಡು ಪಾಳಿಯಲ್ಲಿ 2 ಜನ ಸಿಬ್ಬಂದಿ, ಎಫ್‍ಎಸ್‍ಟಿ, ಎಸ್‍ಎಸ್‍ಟಿ ಹಾಗೂ ವಿಎಸ್‍ಟಿ ತಂಡಗಳಿಗೆ ನೀಡಲಾಗಿರುವ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ ಮಾನಿಟರಿಂಗ್ ಗೆ ದಿನದ ಎರಡು ಪಾಳಿಯಲ್ಲಿ 2 ಜನ ಸಿಬ್ಬಂದಿ, ಸಾಮಾಜಿಕ ಜಾಲತಾಣ ವೀಕ್ಷಣೆಗೆ ದಿನದ 3 ಪಾಳಿಯಲ್ಲಿ 6 ಜನ ಸಿಬ್ಬಂದಿ ಒಳಗೊಂಡಂತೆ ಒಟ್ಟು 17 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸಹಾಯವಾಣಿ ಕೇಂದ್ರದಲ್ಲಿಯೇ ಚೆಕ್‍ಪೋಸ್ಟ್ ಮಾನಿಟರಿಂಗ್, ವಾಹನಗಳ ಜಿಪಿಎಸ್ ಮಾನಿಟರಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಸಹಾಯವಾಣಿ ಹಾಗೂ ಸಿ-ವಿಜಿಲ್ ತಂಡದ ಮೇಲುಸ್ತುವಾರಿಯನ್ನು ಅಧಿಕಾರಿ ಸುನಿತಾ ಅವರು ನಿರ್ವಹಿಸುತ್ತಿದ್ದು, ಚೆಕ್‍ಪೋಸ್ಟ್ ಹಾಗೂ ಜಿಪಿಎಸ್ ಮಾನಿಟರಿಂಗ್ ಉಸ್ತುವಾರಿಯನ್ನು ಅಧಿಕಾರಿ ಟಿ. ಹೊನ್ನೂರಪ್ಪ ನಿರ್ವಹಿಸುತ್ತಿದ್ದಾರೆ.
“ಚುನಾವಣಾ ಮಾಹಿತಿ ಪಡೆಯಲು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಲು ಸಾರ್ವಜನಿಕರು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ಅಥವಾ ಸಿ-ವಿಜಿಲ್ ಆಪ್ ಬಳಸಬಹುದು” ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
(
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ