ಶನಿವಾರ, ಮೇ 6, 2023
ಮುದ್ರಣ ಜಾಹೀರಾತಿಗೆ ಅನುಮತಿ ಕಡ್ಡಾಯ
ಬಳ್ಳಾರಿ,ಮೇ 06(ಕರ್ನಾಟಕ ವಾರ್ತೆ):
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ (ಮೇ 09 ಮತ್ತು ಮೇ 10 ರಂದು) ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ-ಸಂಸ್ಥೆ, ವ್ಯಕ್ತಿಗತವಾಗಿ ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಬೇಕಾದಲ್ಲಿ ಸಂಬಂಧಿಸಿದ ಜಿಲ್ಲಾ ಅಥವಾ ರಾಜ್ಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿಗೆ ಮುಖ್ಯ ಚುನಾವಣಾಧಿಕಾರಿಗಳು, ನಿರ್ವಾಚನ ನಿಲಯ, ಶೇμÁದ್ರಿ ರಸ್ತೆ, ಬೆಂಗಳೂರು ಇಲ್ಲಿ ಸ್ಥಾಪಿಸಲಾಗಿರುವ ರಾಜ್ಯ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಹಾಗೂ ಅದೇ ರೀತಿ ಜಿಲ್ಲೆಯ ಚುನಾವಣಾ ಕಣದಲ್ಲಿರುವ ಅಭ್ಯøರ್ಥಿಗಳು ತಮ್ಮ ಚುನಾವಣಾ ಜಾಹೀರಾತನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವಾರ್ತಾ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗೆ ಮೇ 07ರೊಳಗೆ ಅನುಬಂಧ-ಸಿ ನಿಗಧಿತ ಅರ್ಜಿ ನಮೂನೆಯೊಂದಿಗೆ ಸ್ವಯಂ ದೃಢೀಕೃತ ಎರಡು ಜಾಹೀರಾತು ಪ್ರತಿಯನ್ನು ಸಲ್ಲಿಸಿ ಪೂರ್ವಾನುಮತಿ ಪಡೆದು ಜಾಹೀರಾತು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ.
ಇನ್ನು ಚುನಾವಣಾ ಬಹಿರಂಗ ಪ್ರಚಾರ ಮೇ 08 ರಂದು ಸಂಜೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗೆ ಮೇ 08 ರ ಸಂಜೆ 5 ಗಂಟೆವರೆಗಿನ ಅವಧಿಗೆ ಮಾತ್ರ ಸುದ್ದಿ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ, ಇತರೆ ಸಾರ್ವಜನಿಕ ಡಿಸ್‍ಪ್ಲೆ ಗಳಲ್ಲಿ ಚುನಾವಣಾ ಜಾಹೀರಾತು ಬಿತ್ತರಿಸಲು ಸಮಿತಿಯಿಂದ ಪೂರ್ವಾನುಮತಿ ನೀಡಲಾಗುತ್ತದೆ.
*ಪೂರ್ವಾನುಮತಿ ಇಲ್ಲದೆ ಜಾಹೀರಾತು ಪ್ರಕಟಿಸುವಂತಿಲ್ಲ:*
ಇನ್ನು ಎಲ್ಲ ಪತ್ರಿಕೆಗಳು ಮೇ 09 ಮತ್ತು 10 ರಂದು ಯಾವುದೇ ಚುನಾವಣಾ ಜಾಹಿರಾತುಗಳನ್ನು ಪ್ರಕಟಿಸುವ ಮುನ್ನ ಎಂ.ಸಿ.ಎಂ.ಸಿ ಸಮತಿಯಿಂದ ಪೂರ್ವಾನುಮತಿ ಪಡೆಯಲಾಗಿದಿಯೇ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಜಾಹೀರಾತು ಪ್ರಕಟಿಸಬೇಕು, ಅನುಮತಿ ಇಲ್ಲದೆ ಹೋದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ.
ಮತದಾನದ ಪೂರ್ವ 72 ಗಂಟೆ ಅವಧಿಯಲ್ಲಿ ಬಿತ್ತರಿಸುವ ಸುದ್ದಿ, ಪ್ರಸಾರಗಳ ಮೇಲೆ ಚುನಾವಣ ಆಯೋಗ ತೀವ್ರ ನಿಗಾವಹಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ