ಶುಕ್ರವಾರ, ಮೇ 12, 2023

ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು : ಮೂರು ಸುತ್ತಿನ ಭದ್ರತೆ ಬಳ್ಳಾರಿ,ಮೇ 12(ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಮೇ 13 ರಂದು ಬೆಳಿಗ್ಗೆ 08 ಗಂಟೆಯಿಂದ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದರು. ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಶುಕ್ರವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳನ್ನು ವ್ಯವಸ್ಥಿತಗೊಳಿಸಲಾಗಿದೆ. ಅದರಲ್ಲಿ ಅಂಚೆ ಮತÀ ಎಣಿಕೆಗೆ 02 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಒಟ್ಟು 70 ಟೇಬಲ್‍ಗಳು ಹಾಗೂ ಅಂಚೆ ಮತ ಎಣಿಕೆಗೆ 10 ಟೇಬಲ್‍ಗಳಂತೆ, 85 ಜನ ಎಣಿಕಾ ಮೇಲ್ವಿಚಾರಕರು, 85 ಜನ ಎಣಿಕಾ ಸಹಾಯಕರು ಮತ್ತು 85 ಜನ ಎಣಿಕಾ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಶೇ. 20 ರಷ್ಟು ಹೆಚ್ಚುವರಿ ಮೀಸಲಿರಿಸಿದ ಸಿಬ್ಬಂದಿಗಳು ಇದ್ದಾರೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ಮೊದಲ ಹಂತದ ತರಬೇತಿ ಮೇ 07 ಮತ್ತು ಎರಡನೇ ಹಂತದ ತರಬೇತಿ ಮೇ 12, ಶುಕ್ರವಾರ ನೀಡಲಾಗಿದೆ. 91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 18 ಸುತ್ತು ಮತ ಎಣಿಕೆ ನಡೆಯಲಿದೆ. 92-ಸಿರಗುಪ್ಪ ಕ್ಷೇತ್ರದಲ್ಲಿ ಒಟ್ಟು 227 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 17 ಸುತ್ತು. 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 242 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ 18 ಸುತ್ತು. 94-ಬಳ್ಳಾರಿ ನಗರ ಕ್ಷೇತ್ರದಲ್ಲಿ 262 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 19 ಸುತ್ತು ಹಾಗೂ 95-ಸಂಡೂರು ಕ್ಷೇತ್ರದಲ್ಲಿ ಒಟು 251 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 18 ಸುತ್ತು ಮತ ಎಣಿಕೆ ನಡೆಯಲಿದೆ. ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಹಂತದ ಮತ ಎಣಿಕೆಯ ವಿವರವನ್ನು ಮಾಧ್ಯಮದವರಿಗೆ ತಲುಪಿಸಲು ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಮೂರು ಹಂತದ ಭದ್ರತೆ ನಿಯೋಜನೆ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸುತ್ತ ಒಳ, ಮಧ್ಯ, ಹೊರಗಡೆ ಗಾರ್ಡನ್ ಸೇರಿ ಮೂರು ಹಂತದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲಿ 01-ಡಿಎಸ್‍ಪಿ, 01-ಸಿಪಿಐ, 04-ಪಿಎಸ್‍ಐ, 10-ಎಎಸ್‍ಐ, 35-ಪೊಲೀಸ್ ಸಿಬ್ಬಂದಿಗಳನ್ನು (ಒಳ ಭಾಗ), 03-ಸಿಎಪಿಎಎಫ್ ತಂಡದ ಸಿಬ್ಬಂದಿ ಹೊರಗಡೆ ಭಾಗದಲ್ಲಿ ನಿಯೋಜಿಸಲಾಗಿದೆ ಎಂದರು. *ಭದ್ರತಾ ಸಿಬ್ಬಂದಿ:* ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ ಒದಗಿಸಲು 4 ಡಿಎಸ್‍ಪಿ, 12 ಸಿಪಿಐ, 23 ಪಿಎಸ್‍ಐ, 90 ಎಎಸ್‍ಐ, 484 ಹೆಡ್ ಕಾನ್‍ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್‍ಸ್ಟೇಬಲ್, 20 ಡಬ್ಲ್ಯೂ ಸ್ಟಾಫ್, 4 ಡಿಎಆರ್, 3 ಕೆಎಸ್‍ಆರ್‍ಪಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು. ಮತಎಣಿಕೆಯ ನಂತರ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದು, ಮೆರವಣಿಗೆ ನಡೆಸುವುದು ಹಾಗೂ ಪಟಾಕಿ ಸಿಡಿಸುವುದರಿಂದ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಕಾರ್ಯಕರ್ತರು ಗಲಾಟೆ ನಡೆಸಿ, ಶಾಂತಿ ಕದಡುವುದನ್ನು ತಡೆಗಟ್ಟಲು, ಮತ್ತು ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಯ ಉದ್ದೇಶದಿಂದ ಮೇ 13 ರ ಬೆಳಗ್ಗೆ 06 ರಿಂದ ಮಧ್ಯರಾತ್ರಿ 12 ರವರೆಗೆ ಸಿಆರ್‍ಪಿಸಿ 1973 ರ ಕಲಂ 144 ಮತ್ತು 144 (ಎ) ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ ಹಾಗೂ ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ 200 ಮೀಟರ್ ಪ್ರದೇಶವನ್ನು ನಿಬರ್ಂಧಿತ ಪ್ರದೇಶವೆಂದೂ ಈಗಾಗಲೇ ಆದೇಶಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು. ಬಳಿಕ, ಜಿಲ್ಲಾಧಿಕಾರಿಗಳು, ಮತ ಎಣಿಕಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿ, ಎಣಿಕಾ ಕಾರ್ಯಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಿದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ