ಗುರುವಾರ, ಮೇ 11, 2023
ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂ.ಮಣಿಲಾ ಅವರ ಹೆರಿಗೆ; ಡಿಎಚ್‍ಒ ಡಾ.ಜರ್ನಾಧನ ಸ್ಪಷ್ಟನೆ
ಬಳ್ಳಾರಿ,ಮೇ 11(ಕರ್ನಾಟಕ ವಾರ್ತೆ):
ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಎಂ.ಮಣಿಲಾ ಅವರ ಹೆರಿಗೆಯು ಮತದಾನ ಕೇಂದ್ರದಲ್ಲಿ ಬದಲಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ 10.15 ಕ್ಕೆ ಜರುಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಸ್ಪಷ್ಟನೆ ಮಾಡಿದ್ದಾರೆ.
ಎಂ.ಮಣಿಲಾ ಅವರು ಹೇಳಿರುವಂತೆ, ಮೇ 10 ರಂದು ಬೆಳಗ್ಗೆ 8.45ಕ್ಕೆ ಮತದಾನ ಕೇಂದ್ರಕ್ಕೆ ತೆರಳಿ, 09 ಕ್ಕೆ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮತದಾನ ಕೇಂದ್ರದ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅವರು 9.30 ಕ್ಕೆ ಆಗಮಿಸಿದಾಗ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನೌಸೀನ್ ಮರಿಯಂ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ತಂಡದ ಕಾರ್ಯ ಪರಿಶೀಲನೆಗೋಸ್ಕರ ತೆರಳಿರುತ್ತಾರೆ. ಆ ಸಮಯದಲ್ಲಿ ಕರ್ತವ್ಯದ ಮೇಲಿದ್ದ ಶೂಶ್ರೂಷಣಾಧಿಕಾರಿ ಸುನೀತಾ ಅವರು, ತಕ್ಷಣ ಗರ್ಭಿಣಿಯನ್ನು ಹೆರಿಗೆಗಾಗಿ ದಾಖಲು ಮಾಡಿಕೊಂಡಿದ್ದಾರೆ.
ವೈದ್ಯಾಧಿಕಾರಿ ಡಾ.ನೌಸೀನ್ ಮರಿಯಂ ಅವರಿಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಂತೆ ಹೆರಿಗೆ ನಿರ್ವಹಿಸಿದ್ದು, ಬೆಳಿಗ್ಗೆ 10.15 ಕ್ಕೆ ಹೆರಿಗೆ ಆಗಿದೆ. ಮಣೀಲಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು 3.3 ಕೆಜಿ ಇದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ನಂತರ ತಕ್ಷಣ ಮಗುವಿಗೆ ಎದೆ ಹಾಲು ಉಣಿಸಲಾಗಿದ್ದು ಅಗತ್ಯ ವೈದ್ಯಕೀಯ ಉಪಚಾರ ಕೈಗೊಳ್ಳಲಾಗಿದೆ. ಪ್ರಸ್ತುತ ಇದು ಮೂರನೆಯ ಹೆರಿಗೆಯಾಗಿದ್ದು, ಮೊದಲ ಎರಡು ಮಕ್ಕಳು ಸಹ ಗಂಡು ಮಕ್ಕಳಾಗಿದ್ದು, ತಾಯಿಯು ಆರೋಗ್ಯವಾಗಿದ್ದಾರೆ ಎಂದು ಡಾ.ಜನಾರ್ಧನ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಣೀಲಾ ಅವರ ಹೆರಿಗೆಯು ಕೊರ್ಲಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆರವೇರಿದ್ದು, ಮತದಾನ ಕೇಂದ್ರದಲ್ಲಿ ಜರುಗಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಸಹ ಹಾಜರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ