ಶುಕ್ರವಾರ, ಮೇ 26, 2023
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ಮಳೆಯಿಂದಾಗುವ ಹಾನಿ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ; ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ
ಬಳ್ಳಾರಿ,ಮೇ 26(ಕರ್ನಾಟಕ ವಾರ್ತೆ):
ಮುಂಗಾರು ಮಳೆ ಆರಂಭವಾಗಿರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಸಂದರ್ಭದಲ್ಲಿ ಸಂಭವನೀಯ ಅತಿವೃಷ್ಟಿ, ಪ್ರವಾಹ, ಬೆಳೆ ಹಾನಿಯನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಂಭವನೀಯ ಅತಿವೃಷ್ಟಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅತಿ ಮಳೆಯಿಂದಾಗಿ ಹಾನಿ ಅಥವಾ ಪ್ರವಾಹ ಉಂಟಾದರೆ, ಹಾನಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಂಡು ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ನಗರದಲ್ಲಿನ ಎಸ್.ಎನ್ ಪೇಟೆಯ ಕೆಳಸೇತುವೆಯಲ್ಲಿ ಮಳೆ ನೀರು ಸಂಗ್ರಹವಾಗಬಹುದಾಗಿದ್ದು, ಹೆಚ್ಚುವರಿ ನೀರು ಹೊರ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ಚರಂಡಿ, ರಾಜಕಾಲುವೆಗಳ ಸ್ವಚ್ಛತೆ, ದುರಸ್ತಿ ಕಾರ್ಯ ಮಾಡಬೇಕು. ನೀರು ಸಂಗ್ರಹವಾಗಿ ನಿಲ್ಲದಂತೆ ರಾಜಕಾಲುವೆಗಳಿಗೆ ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು ಎಂದು ತಿಳಿಸಿದರು.
ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ಗ್ರಾಮಪಂಚಾಯತ ರಸ್ತೆಗಳನ್ನು ಪರಿಶೀಲನೆ ಮಾಡಿ ಅಗತ್ಯವಿದ್ದರೆ ತುರ್ತುಕಾಮಗಾರಿಗೆ ಕ್ರಮವಹಿಸಬೇಕು. ಸೇತುವೆಗಳ ಸುಸ್ಥಿತಿ ಪರಿಶೀಲಿಸಿ, ದುರಸ್ತಿ ಕಾಮಗಾರಿಗಳಿದ್ದಲ್ಲಿ ತ್ವರಿತಗತಿಯಲ್ಲಿ ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಅತಿಯಾಗಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರಿಗೆ ತೊಂದರೆ ಆಗುವ ಸಾಧ್ಯತೆಗಳಿರುತ್ತವೆ, ಈ ಕುರಿತು ಪಾಲಿಕೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ವಾರ್ಡ್‍ವಾರು ಸ್ಥಳ ಗುರುತಿಸಿ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
*ಜಿಲ್ಲಾಡಳಿತದಿಂದ ಪರಿಹಾರ ವಿತರಣೆ:* ಜಿಲ್ಲೆಯಲ್ಲಿ ಸುರಿದ ಮಳೆಗೆ ಕಳೆದ ವಾರದಲ್ಲಿ ಮನೆ ಕುಸಿತಕ್ಕೆ ಒಬ್ಬರು, ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. ಸಿಡಿಲು ಬಡಿದು ಬಳ್ಳಾರಿ ತಾಲೂಕು 1, ಸಿರುಗುಪ್ಪ 1, ಸಂಡೂರು 1 ಮತ್ತು ಸಿರುಗುಪ್ಪ ತಾಲೂಕಿನ ಮನೆಕುಸಿತಕ್ಕೆ ಒಬ್ಬರು ಸೇರಿ ಒಟ್ಟು ನಾಲ್ವರು ಮೃತ ಪಟ್ಟಿದ್ದಾರೆ. ಈಗಾಗಲೇ ನಾಲ್ವರಿಗೂ ನಿಯಮಾನುಸಾರ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಾದಲ್ಲಿ, ಉಂಟಾಗಬಹುದಾದ ರಸ್ತೆ, ಸೇತುವೆಗಳ ಹಾನಿ ಬಗ್ಗೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಅಂತರ್‍ರಾಜ್ಯ ಗಡಿ ವ್ಯಾಪ್ತಿಯಲ್ಲಿ ಬರುವ ಹಗರಿ (ವೇದಾವತಿ), ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಹಾಗೂ ಕಂಪ್ಲಿ ಸೇತುವೆಗಳ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗಾಳಿ-ಮಳೆಯಿಂದ ವಿದ್ಯುತ್ ಕಂಬಗಳು ಹಾನಿಗೀಡಾದಲ್ಲಿ, ವಿದ್ಯುತ್ ಸಂಪರ್ಕ ತ್ವರಿತವಾಗಿ ಪುನರ್ ಸ್ಥಾಪಿಸುವ ಕೆಲಸವನ್ನು ಜೆಸ್ಕಾಂ ಅಧಿಕಾರಿಗಳು ಮಾಡಬೇಕು ಎಂದರು.
*ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ನೀಡಿ:* ಮಾನ್ಸೂನ್ ಪ್ರಾರಂಭವಾಗುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಸಾಂಕ್ರಾಮಿಕ ರೋಗಗಳ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕುರಿತು ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಸರ್ಕಾರಿ ಹಾಗೂ ಇತರೆ ಕಟ್ಟಡಗಳ ಮೇಲೆ ಸ್ವಚ್ಛಗೊಳಿಸಬೇಕು ಹಾಗೂ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದರು.
*ಪ್ರವಾಹವನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧ:* ವಿಪತ್ತು ನಿರ್ವಹಣೆಗೆ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸುವ ಹಾಗೂ ಸಹಕಾರಿಯಾಗುವ ನಿಟ್ಟಿನಲ್ಲಿ ವಿಪತ್ತುಗಳು ಎದುರಾದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತವು ಈಗಾಗಲೇ 3 ಬೋಟ್ ಸೇರಿದಂತೆ ಅಗತ್ಯ ಸಲಕರಣೆ (ಲೈಫ್ ಜಾಕೇಟ್) ಗಳನ್ನು ಖರೀದಿಸಿದೆ. ರಕ್ಷಣಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಪತ್ತು ನಿರ್ವಹಣೆ ಮಾಡುವಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:* ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ಜನ ಜನವಾರುಗಳಿಗೆ ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಕ್ಷೇತ್ರವಾರು ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಬಳ್ಳಾರಿ ಅಗ್ನಿಶಾಮಕ ದಳ ಕಚೇರಿಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ-9480823685, ಜಿಲ್ಲಾ ಗೃಹ ರಕ್ಷಕ ಕಚೇರಿಯ ಅಗ್ನಿಶಾಮಕ ಆಧಿಕಾರಿಗಳು ಹಾಗೂ ಸಮಾದೇಷ್ಟರಾದ ಶಕೀಬ್.ಎಂ-9483641234. ಸಿರುಗುಪ್ಪ ಅಗ್ನಿಶಾಮಕ ದಳ ಕಚೇರಿಯ ಅಗ್ನಿಶಾಮಕ ಅಧಿಕಾರಿಗಳು, ಕುರುಗೋಡಿನ ಅಗ್ನಿಶಾಮಕ ದಳ ಕಚೇರಿಯ ಅಗ್ನಿಶಾಮಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ನೀರಾವರಿ, ಲೋಕೋಪಯೋಗಿ, ಆರ್‍ಡಿಪಿಆರ್, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಮಾತನಾಡಿದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ