ಶುಕ್ರವಾರ, ಅಕ್ಟೋಬರ್ 6, 2023

ಅ.07ರಂದು ಜಿಲ್ಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಪ್ರವಾಸ

ಬಳ್ಳಾರಿ,ಅ.06(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡವು ಜಿಲ್ಲೆಗೆ ಅಗಮಿಸುತ್ತಿದ್ದು, ಅಕ್ಟೋಬರ್ 07ರಂದು ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವರು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ತಂಡದಲ್ಲಿ ಕೇಂದ್ರ ಕುಡಿಯುವ ನೀರು ಹಾಗು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ.ರಾಜಶೇಖರ್ (ಐ.ಎ.ಎಸ್) ಅವರ ನೇತೃತ್ವದ ಪಶುಸಂಗೋಪನೆ ಇಲಾಖೆ ನಿರ್ದೇಶಕರಾದ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ (ಐ.ಎ.ಎಸ್) ಸೇರಿ ಮೂವರು ಸದಸ್ಯರನ್ನೊಳಗೊಂಡಿದ್ದು, ತಂಡವು ಜಿಲ್ಲೆಯ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ರೈತರೊಂದಿಗೆ ನೇರ ಸಂವಾದ ನಡೆಸಿ ಪರಿಶೀಲನೆ ನಡೆಸುವರು. *ತಂಡದ ಪ್ರವಾಸದ ವಿವರ:* ಅ.07 ರಂದು ಮಧ್ಯಾಹ್ನ 02.10 ರಿಂದ 02.30 ರವರೆಗೆ ಕೇಂದ್ರ ಬರ ಅಧ್ಯಯನ ತಂಡವು ಕೂಡ್ಲಿಗಿಯ ಅತಿಥಿ ಗೃಹದಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರಿಂದ ಮಾಹಿತಿ ಪಡೆದುಕೊಳ್ಳಲಿದೆ. ತದನಂತರ ಮಧ್ಯಾಹ್ನ 02.50 ಕ್ಕೆ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಮೆಕ್ಕೆಜೋಳ ಬೆಳೆಗಳಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 3.30 ಕ್ಕೆ ಅಲ್ಲಿನ ರೈತರೊಂದಿಗೆ ಸಂವಾದ ನಡೆಸುವರು. ಬಳಿಕ ಮಧ್ಯಾಹ್ನ 03.50 ಕ್ಕೆ ಕೋಡಿಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ರಾಗಿ ಮತ್ತು ಮೆಕ್ಕೆಜೋಳ ಹಾನಿಗೊಳಗಾದ ಬೆಳೆಗಳಿಗೆ ಭೇಟಿ ನೀಡಿ, ಬಳಿಕ ರೈತರೊಂದಿಗೆ ಸಂವಾದ ನಡೆಸುವರು. ನಂತರ ಸಂಜೆ 04.20 ಕ್ಕೆ ಹಳೇಜೋಗಿಕಲ್ಲು ಗ್ರಾ.ಪಂ.ಗೆ ನೀರು ಸರಬರಾಜು ಮಾಡುವ ಬಂಡ್ರಿಯ ಜಲ ಜೀವನ್ ಮಿಷನ್ ಕಾಮಗಾರಿ ವೀಕ್ಷಣೆ ಮಾಡುವರು. ಸಂಜೆ 04.45 ಕ್ಕೆ ಶ್ರೀರಾಮ ಶೆಟ್ಟಿ ಹಳ್ಳಿಯಲ್ಲಿ ಮೃತ ರೈತನ ಮನೆಗೆ ಭೇಟಿ ನೀಡುವರು. ನಂತರ, ಸಂಜೆ 05.15 ಕ್ಕೆ ನಿಡಗುರ್ತಿ ಗ್ರಾಮ ವ್ಯಾಪ್ತಿಯಲ್ಲಿ ಕೆರೆ ವೀಕ್ಷಣೆ, ಶೇಂಗಾ ಮತ್ತು ರಾಗಿ ಹಾನಿಗೊಳಗಾದ ಬೆಳೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸುವರು. ನಂತರ ಒಣ ಕೆರೆಯಲ್ಲಿ ನರೇಗಾ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ವೀಕ್ಷಣೆ ಮಾಡುವರು. ಬಳಿಕ ಸಂಜೆ 05.45 ಕ್ಕೆ ಎನ್.ಮಲ್ಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಹಾನಿಗೊಳಗಾದ ತೊಗರಿ ಬೆಳೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು, ನಂತರ ರೈತರೊಂದಿಗೆ ಸಂವಾದ ನಡೆಸುವರು. ಕೃಷಿ ಇಲಾಖೆಯಿಂದ ಕಡಲೆಕಾಯಿ ಬೆಳೆಗೆ ಸಿಂಪಡಣೆ ಹನಿ ನೀರಾವರಿ, ತೋಟಗಾರಿಕೆ ಇಲಾಖೆಯಿಂದ ಮಾವಿನ ಬೆಳೆಗೆ ತುಂತುರು ಹನಿ ನೀರಾವರಿ, ನರೇಗಾದಡಿ ತೆಂಗಿನ ತೋಟಕ್ಕೆ ನೀರಾವರಿ ಪದ್ಧತಿ ಕುರಿತು ಚರ್ಚಿಸುವರು. ನಂತರ 06.15 ಕ್ಕೆ ನಿರ್ಗಮಿಸಿ ತೋರಣಗಲ್ಲಿಗೆ ತೆರಳುವರು. ಕೇಂದ್ರ ತಂಡವು ಅಕ್ಟೋಬರ್ 8 ರಂದು ಬೆಂಗಳೂರು ತೆರಳಿ ಅಕ್ಟೋಬರ್ 9 ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರಣೆ ಪಡೆದುಕೊಂಡು ದೆಹಲಿಗೆ ತೆರಳಲಿದೆ. ಕೇಂದ್ರ ತಂಡವು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿದ್ದಾರೆ. ಹಲವು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದ್ದು, ಕೆಲವೆಡೆ ಬೆಳೆ ಇದ್ದರೂ ಉಂಟಾಗಲಿರುವ ತೀವ್ರ ಇಳುವರಿ ಕುಸಿತದ ಬಗ್ಗೆಯೂ ವಿವರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ