ಸೋಮವಾರ, ಅಕ್ಟೋಬರ್ 9, 2023
ಇಂದ್ರಧನುಷ್ ಮೂರನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 5,040 ಮಕ್ಕಳಿಗೆ ಲಸಿಕೆ ಗುರಿ ಮಕ್ಕಳಿಗೆ 5 ವರ್ಷದಲ್ಲಿ 7 ಬಾರಿ ಲಸಿಕೆ ಹಾಕಿಸಿರಿ: ಮೇಯರ್ ಡಿ.ತ್ರಿವೇಣಿ
ಬಳ್ಳಾರಿ,ಅ.09(ಕರ್ನಾಟಕ ವಾರ್ತೆ):
ಹುಟ್ಟಿನಿಂದ 05 ವರ್ಷ ವಯಸ್ಸು ತುಂಬುವವರೆಗೆ ಮಕ್ಕಳಿಗೆ ಏಳು ಬಾರಿ ಲಸಿಕೆ ಹಾಕಿಸಲು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಬರುವುದು ಮರೆಯಬಾರದು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ತಾಯಂದಿರಿಗೆ ವಿನಂತಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 29ನೇ ವಾರ್ಡ್ ಬಂಡಿಹಟ್ಟಿಯ ಆಶ್ರಯ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂರನೇ ಸುತ್ತಿನ ಲಸಿಕೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಸಿಕೆಯಿಂದ ವಂಚಿತರಾಗಿರುವ, ಲಸಿಕೆ ಪಡೆಯದ ಹಾಗೂ ಕಾರಣಾಂತರಗಳಿಂದ ಲಸಿಕೆ ಬಿಟ್ಟುಹೋದ ಮಕ್ಕಳನ್ನು ಹಾಗೂ ಟಿಡಿ ಲಸಿಕೆ ಪಡೆಯದ ಗರ್ಭಿಣಿಯರನ್ನು ಸಮೀಕ್ಷೆ ಮೂಲಕ ಗುರ್ತಿಸಿ ಅವರಿಗೆ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂರನೇ ಸುತ್ತು (ಅ.09ರಿಂದ 14ರವರೆಗೆ) ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಪ್ರತಿಯೊಬ್ಬರೂ ಲಸಿಕೆ ಹಾಕಿಸಿ, ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಮಾತನಾಡಿ, ಪ್ರಸ್ತುತ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ ಮೂರನೇ ಸುತ್ತಿನಲ್ಲಿ ಜಿಲ್ಲೆಯಾದ್ಯಂತ ಹುಟ್ಟಿನಿಂದ ಐದು ವರ್ಷದೊಳಗಿನ 5,040 ಮಕ್ಕಳನ್ನು ಗುರ್ತಿಸಲಾಗಿದ್ದು, ಒಟ್ಟು 346 ಲಸಿಕಾ ಅಧಿವೇಶನಗಳ ಮೂಲಕ ಲಸಿಕೆ ಹಾಕಲಾಗುವುದು ಹಾಗೂ 1,185 ಗರ್ಭಿಣಿ ಮಹಿಳೆಯರಿಗೆ ಟಿಡಿ ಲಸಿಕೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಅರ್ಹ ಗರ್ಭಿಣಿಯರು ಲಸಿಕೆ ಪಡೆಯಬೇಕು ಎಂದು ತಿಳಿಸಿದರು.
ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳಾದ ಪೆÇೀಲಿಯೋ, ಬಾಲಕ್ಷಯ, ಕಾಮಾಲೆ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಚ್ ಇನ್‍ಫ್ಲುಯೆಂಜಾ, ನ್ಯೂಮೋಕೊಕಲ್ ನ್ಯೂಮೋನಿಯಾ, ರೋಟಾವೈರಸ್ ಬೇಧಿ, ದಡಾರ-ರೂಬೆಲ್ಲಾ, ಮೆದುಳು ಜ್ವರ, ಇರುಳುಗಣ್ಣು ಖಾಯಿಲೆಗಳಿಗೆ ಸಂಬಂಧಿಸಿದಂತೆ ಹುಟ್ಟಿದ ತಕ್ಷಣ ಹಾಗೂ ಮಗುವಿನ ವಯಸ್ಸು ಒಂದುವರೆ ತಿಂಗಳು, ಎರಡುವರೆ ತಿಂಗಳು, ಮೂರುವರೆ ತಿಂಗಳು, ಒಂಬತ್ತನೆ ತಿಂಗಳು ಅವಧಿಯಲ್ಲಿ ಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರು ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ನಿಮಿತ್ತ ಮಗುವಿಗೆ ಪೆÇೀಲಿಯೋ ಲಸಿಕೆ ಹಾಕಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಮಹಾನಗರ ಪಾಲಿಕೆಯ 29 ವಾರ್ಡ್ ಸದಸ್ಯ ಗೋವಿಂದರಾಜು, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಲಯ ಅಧಿಕಾರಿ ಡಾ.ಶ್ರೀಧರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಬಂಡಿಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಯಾಸ್ಮಿನ್, ಡಾ.ಕಾಶಿ ಪ್ರಸಾದ್ ಸೇರಿದಂತೆ ಶುಶ್ರೂಷಣಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ತಾಯಿ-ಮಕ್ಕಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ