ಶನಿವಾರ, ಅಕ್ಟೋಬರ್ 7, 2023

ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ ಧೃತಿಗೆಡದಂತೆ ರೈತರಿಗೆ ಮನವರಿಕೆ

ಬಳ್ಳಾರಿ,ಅ.07(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ (ಐ.ಎ.ಎಸ್) ನೇತೃತ್ವದ, ಮೂವರು ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು ಶನಿವಾರದಂದು ಸಂಡೂರು ತಾಲ್ಲೂಕಿನ ಕೆಲ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ನಡೆಸಿತು. ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ.ರಾಜಶೇಖರ್ ಐ.ಎ.ಎಸ್ ನೇತೃತ್ವದ, ಪಶುಸಂಗೋಪನೆ ಇಲಾಖೆಯ ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಐ.ಎ.ಎಸ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡವು, ನಿಗದಿಪಡಿಸಿದಂತೆ ಸಂಡೂರು ತಾಲೂಕಿನ ಸೋವೆನಹಳ್ಳಿ ಗ್ರಾಮದ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ, ಬರ ಅಧ್ಯಯನ ಸಮೀಕ್ಷೆ ನಡೆಸಿ, ಮಾಹಿತಿ ಪಡೆದುಕೊಂಡಿತು. ಬಳಿಕ, ಬಂಡ್ರಿ ಗ್ರಾಮ ವ್ಯಾಪ್ತಿಯ ಗೊಲ್ಲರಹಟ್ಟಿಯ ರೈತ ತಿಮ್ಮಪ್ಪನ ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿತು. "ಸಾವಿರಾರು ರೂಪಾಯಿ ರೊಕ್ಕ ಹಾಕಿ, ಸಾಲ- ಸೂಲ ಮಾಡಿ ಬಿತ್ತಿನಿ, ಮಳೆ ಇಲ್ಲದೆ ಬೆಳೆ ಇಲ್ಲದೇ, ಗುಳೇ ಹೋಗೋ ಪರಿಸ್ಥಿತಿ ಬಂದಿದೆ" ಎಂದು ಕೇಂದ್ರ ತಂಡದ ಮುಂದೆ ರೈತ ತಿಮ್ಮಪ್ಪ ತಮ್ಮ ಅಳಲು ತೋಡಿಕೊಂಡರು. ಕೇಂದ್ರ ತಂಡದ ಅಧಿಕಾರಿಯೊಬ್ಬರು, "ಹೋದ ವರ್ಷ ಏನು ಬಿತ್ತನೆ ಮಾಡಿದ್ದಿ, ಎಷ್ಟು ಖರ್ಚು ಮಾಡಿದ್ದಿ ಎಂದು ಪ್ರಶ್ನಿಸಿದ ಅವರು, ಈಗ ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸ್ತಿರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಡ್ ಹೊಂದಿದ್ದೀರಾ?" ಎಂದು ರೈತನೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು. ಬಳಿಕ ಅಲ್ಲಿಯೇ ಇನೊಬ್ಬ ರೈತನ ರಾಗಿ ಬೆಳೆಗೆ ಭೇಟಿ ನೀಡಿ, ಹಸಿರಾಗಿ ಕಂಡರೂ ಇಳುವರಿಯಲ್ಲಿ ಭಾರಿ ಕುಸಿತ ಆಗಿರುವುದನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ನಂತರದಲ್ಲಿ ಸಂಡೂರು ತಾಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಲ್ಲಿ ಸೆ.15ರಂದು ರೈತ ಭಂಗಿ ಕಾಂತಪ್ಪನು, ಸಾಲ ಮಾಡಿ ಬೋರ್ವೇಲ್ ಕೊರೆಸಿದ್ದ, ಬೋರ್ವೆಲ್ ನೀರು ಸಿಗದ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ಭಂಗಿ ಕಾಂತಪ್ಪನ ಕುಟುಂಬಕ್ಕೆ ಕೇಂದ್ರ ಬರ ಅಧ್ಯಯನ ತಂಡವು ಭೇಟಿ ನೀಡಿತು. ಕುಟುಂಬಕ್ಕೆ ಧೈರ್ಯ ತುಂಬಿ, ಪರಿಹಾರಕ್ಕೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ, ನಿಮ್ಮ ಜೊತೆಗೆ ಸರ್ಕಾರ ಇದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರೈತರು ಧೃತಿಗೇಡಬಾರದು, ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಂಡವು ಮನವರಿಕೆ ಮಾಡಿತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಬರ ಅಧ್ಯಯನ ತಂಡದ ಅಧಿಕಾರಿಗಳೊಂದಿಗೆ ಖುದ್ದು ಹಾಜರಿದ್ದು, ಸಂಡೂರು ತಾಲೂಕಿನ ವಿವಿಧೆಡೆ ಸಂಚರಿಸಿ, ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಖುದ್ದು ತಾವೇ ಮನವರಿಕೆ ಮಾಡಿಕೊಟ್ಟರು.ಕ್ಷೇತ್ರ ಭೇಟಿಗೂ ಮುನ್ನ ಕೂಡ್ಲಿಗಿಯ ಅತಿಥಿ ಗೃಹದಲ್ಲಿ ಜಿಲ್ಲೆಯ ಬರದ ವಸ್ತು ಸ್ಥಿತಿ ಬಗ್ಗೆ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರು, ಇನ್ನಿತರರು ಇದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ