ಗುರುವಾರ, ಜನವರಿ 11, 2024

ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಜ.10(ಕರ್ನಾಟಕ ವಾರ್ತೆ): ಮಕ್ಕಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದರ ಜೊತೆಗೆ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿ ಭವಿಷ್ಯದ ಬದುಕು ಕಟ್ಟಿಕೊಳ್ಳುವಂತೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಿರ್ಮಾಣ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ನಂತರ ಮುಂದೇನು? ಎಂಬ ವಿಷಯದ ಕುರಿತು ಜಿಲ್ಲಾ ಪಂಚಾಯತ್ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ವೃತ್ತಿಯಾಧಾರಿತ ವಿವಿಧ ಕೋರ್ಸ್‍ಗಳ ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಸ್‍ಎಸ್‍ಎಲ್‍ಸಿ ಹಂತದಲ್ಲಿ ಮಕ್ಕಳನ್ನು ಮುನ್ನಲೆಗೆ ತರಲು ಈ ತರಬೇತಿ ಬಹಳ ಸದುಪಯೋಗ ಆಗಲಿದೆ. 165 ಅಧಿಕಾರಿಗಳು ತರಬೇತಿ ಪಡೆದ ನಂತರ ನಿಯೋಜಿಸಿದ ಶಾಲೆಗಳಿಗೆ ಜ.17 ರಿಂದ 20 ರೊಳಗಾಗಿ ಭೇಟಿ ನೀಡಿ ಮಕ್ಕಳಿಗೂ ತರಬೇತಿ ನೀಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಗ್ರಾಮೀಣ ಭಾಗದ ಹಲವು ಮಕ್ಕಳಿಗೆ ಕೆಲವು ವಿಷಯಗಳ ಬಗ್ಗೆ ಮಾತ್ರ ಮಾಹಿತಿ ಇರುತ್ತವೆ. ಹಲವು ಕೋರ್ಸ್ ಮತ್ತು ವೃತ್ತಿಗಳ ಬಗ್ಗೆ ಮಾಹಿತಿ ನೀಡಲು ಈ ತರಬೇತಿ ಸಹಕಾರಿಯಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಹಲವು ವಿಷಯ ಮತ್ತು ವೃತ್ತಿಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವುದರ ಮೂಲಕ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು. ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಯಾಗುವುದೆಂಬ ಆಶಯದ ನುಡಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‍ನ ಹಿರಿಯ ಮತ್ತು ಕಿರಿಯ ಉಪನ್ಯಾಸಕರು, ಕ್ಷೇತ್ರ ಸಮನ್ವಯಾಧಿಕಾರಿಗಳು, ಪ್ರೌಢಶಾಲೆಗಳ ಮುಖ್ಯಗುರುಗಳು, ಇ.ಸಿ.ಓ, ಬಿ.ಆರ್.ಪಿ.ಸಿ.ಆರ್.ಪಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ