ಮಂಗಳವಾರ, ಮೇ 2, 2023

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅನುಮತಿಯಿಲ್ಲದೇ ಚುನಾವಣಾ ಪ್ರಚಾರ ಕಾರ್ಯ: 2 ಪ್ರಕರಣ ದಾಖಲು ರೂ.2 ಲಕ್ಷ ನಗದು, 87.39 ಲೀ. ಮದ್ಯ ವಶ: ಡಿಸಿ ಮಾಲಪಾಟಿ ಮಾಹಿತಿ ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರೆದಿದ್ದು, ಸೋಮವಾರದಂದು 2 ಲಕ್ಷ ರೂ. ನಗದು ಹಣ ಮತ್ತು 40,573 ರೂ. ಮೌಲ್ಯದ 87.39 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಹಾಗೂ ಕಂಪಿಯಲ್ಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಅನುಮತಿಯಿಲ್ಲದೇ ಪ್ರಚಾರ ಕಾರ್ಯ ನಡೆಸುತ್ತಿದ್ದವರ ವಿರುದ್ಧ 2 ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧವಾಳ ಚೆಕ್‍ಪೋಸ್ಟ್ ಬಳಿ ಎಸ್‍ಎಸ್‍ಟಿ ತಂಡವು ತಪಾಸಣೆ ವೇಳೆ 2 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಿದೆ. ಪ್ರಕರಣ ದಾಖಲಿಸಿರುವುದಿಲ್ಲ. ಅಬಕಾರಿ ಇಲಾಖೆಯಿಂದ 27,084 ರೂ. ಮೌಲ್ಯದ 52.83 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 13,489 ರೂ. ಮೌಲ್ಯದ 34.56 ಲೀಟರ್ ಮದ್ಯ ಸೇರಿ ಒಟ್ಟು 40,573 ರೂ. ಮೌಲ್ಯದ 87.39 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒಟ್ಟು 51 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ. 91-ಕಂಪ್ಲಿ ವಿಧಾನಸಭಾ ಕ್ಷೇತ್ರದ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಟಿ.ಹೆಚ್. ಸುರೇಶ್ ಬಾಬು ಅವರ ಪರವಾಗಿ ಪೂರ್ವಾನುಮತಿ ಪಡೆಯದೆ, ಮತದಾರರ ಪಟ್ಟಿಯೊಂದಿಗೆ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದ ವೇಳೆ, ಎಫ್‍ಎಸ್‍ಟಿ ತಂಡವು ದಾಳಿ ನಡೆಸಿ ಪಕ್ಷದ ಚಿಹ್ನೆವುಳ್ಳ 10 ಮತದಾರರ ಚೀಟಿಗಳನ್ನು ವಶಪಡಿಸಿಕೊಂಡು ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಂಪ್ಲಿಯ ಗವಿಸಿದ್ದಪ್ಪ ವೃತ್ತ, ವಿನಾಯಕ ನಗರ ಮೊದಲನೇ ಹಂತ ಮತ್ತು ನಂ.10 ಮುದ್ದಾಪುರ, ದೇವಸಮುದ್ರ ಗ್ರಾಮಗಳಲ್ಲಿ ಮೊಬೈಲ್ ಆಪ್ ಬಳಸಿ, ಮತದಾರರ ಹೆಸರು, ವಿಳಾಸ, ಮತದಾನ ಮಾಡುವ ಸ್ಥಳ ವಿವರವುಳ್ಳ ಚೀಟಿ ಮುದ್ರಿಸಿ ನೀಡುವ ಮೂಲಕ ಪೂರ್ವಾನುಮತಿ ರಹಿತ ಮತ ಪ್ರಚಾರ ಮಾಡುತ್ತಿದ್ದನ್ನು ಎಫ್‍ಎಸ್‍ಟಿ ತಂಡವು ದಾಳಿ ನಡೆಸಿ, ತಪಾಸಣೆ ವೇಳೆ 6 ಮೊಬೈಲ್ ಹಾಗೂ 12 ಪ್ರಿಂಟಿಂಗ್ ಮಷಿನ್‍ಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ