ಮಂಗಳವಾರ, ಏಪ್ರಿಲ್ 11, 2023

ಬೇಸಿಗೆ ಹಿನ್ನಲೆ ಬಿಸಿಯಾದ ಆಹಾರ ಸೇವಿಸಿ ಸಂಭಾವ್ಯ ವಾಂತಿ-ಬೇಧಿ ತಡೆಗಟ್ಟಲು ಸಹಕರಿಸಿ: ಡಿಹೆಚ್‍ಓ ಡಾ.ಜನಾರ್ಧನ್ ಬಳ್ಳಾರಿ,ಏ.11(ಕರ್ನಾಟಕ ವಾರ್ತೆ): ಬೇಸಿಗೆಯಲ್ಲಿ ತಯಾರಿಸಿದ ಆಹಾರವು ಬೇಗನೇ ಹಾಳಾಗುವ ಸಾಧ್ಯತೆ ಹೆಚ್ಚು ಇರುವುದರಿಂದ, ಆಹಾರವು ಬಿಸಿಯಾಗಿರುವಾಗಲೇ ಸೇವಿಸುವ ಮೂಲಕ ಸಂಭಾವ್ಯ ವಾಂತಿ-ಬೇಧಿಯನ್ನು ತಡೆಗಟ್ಟಲು ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ತಿಳಿಸಿದ್ದಾರೆ. ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಕುಂಟನಾಳ ಗ್ರಾಮದಲ್ಲಿ ಕಂಡು ಬಂದಿರುವ ವಾಂತಿ-ಬೇಧಿ ಪ್ರಕರಣಗಳ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ನೀಡುತ್ತಾ ಈಗಾಗಲೇ ಗ್ರಾಮದಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿದ್ದು, ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಎಲ್ಲರೂ ಆರೋಗ್ಯದಿಂದ ಇದ್ದಾರೆ. ಕಲುಷಿತ ನೀರು ಸೇವೆನೆಯಿಂದ ವಾಂತಿ-ಬೇಧಿ ಕಂಡುಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಕುಡಿಯುವ ನೀರನ್ನು ಕನಿಷ್ಟ 20 ನಿಮಿಷಗಳ ಕಾಲ ಕುದಿಸಿದ ನಂತರ ಆರಿಸಿ, ಸೋಸಿ ಕುಡಿಯಬೇಕು ಎಂದು ತಿಳಿಸಿದರು. ಗುಣಮುಖರಾದವರ ಮನೆಗಳಿಗೆ ಹಾಗೂ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಬೇಟಿ ನೀಡಿ ಗ್ರಾಮ ಪಂಚಾಯತ್ ಮೂಲಕ ಈಗಾಗಲೇ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಹೊಲಗಳಿಗೆ ತೆರಳುವಾಗ ಮನೆಯಿಂದಲೇ ನೀರು ತೆಗೆದುಕೊಂಡು ಹೋಗುವ ರೂಢಿಯನ್ನು ಅಳವಡಿಸಿಕೊಳ್ಳಬೇಕು ಎಂದು ವಿನಂತಿಸಿದರು. ಸಾರ್ವಜನಿಕರು ಮುಂಜಾಗೃತೆಗಾಗಿ ಊಟದ ಮೊದಲು ಮತ್ತು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‍ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಬೇಕು. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಿರಿ, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಿ, ಬಿಸಿಯಾದ ಆಹಾರ ಮಾತ್ರ ಸೇವಿಸಿ-ತಂಗಳು ಆಹಾರವನ್ನು ಸೇವಿಸಬಾರದು. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು. ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ನೊಣಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೆಕರ್, ವೈದ್ಯಾಧಿಕಾರಿ ಡಾ.ನಾರಾಯಣ್ ಬಾಬು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾಲಾರಾ ತಂಡದ ಕೆ.ಎಮ್ ಶಿವಕುಮಾರ್, ಗೋವಿಂದಪ್ಪ, ತಿಪ್ಪೇಸ್ವಾಮಿ, ಉಮಾಮಹೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಾರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಜಯಲಕ್ಷ್ಮಿ, ಶಂಕ್ರಮ್ಮ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಾಜೀದಾ ಸುಲ್ತಾನ್, ಪ್ರಿಯಾಮಣಿ, ಮರ್ಸಿ, ಲಲಿತಮ್ಮ ದೇಸಾಯಿ, ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ