ಬುಧವಾರ, ಏಪ್ರಿಲ್ 12, 2023
ಕೊಳಗಲ್ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ಮತದಾನ ಜಾಗೃತಿ ಜಾಥಾ
ಪ್ರಜಾಪ್ರಭುತ್ವ ಸದೃಢತೆಗೆ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ: ಜಿಪಂ ಸಿಇಒ ರಾಹುಲ್ ಶರಣಪ್ಪ
ಬಳ್ಳಾರಿ,ಏ.12(ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವ ಸದೃಢತೆಗೆ ಮತದಾನ ಒಂದು ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್, ಕೊಳಗಲ್ಲು ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿಯಿಂದ ಬುಧವಾರ ಕೊಳಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಮೂಡಿಸುವ ಎತ್ತಿನ ಬಂಡಿಗಳ ಜಾಥಾದಲ್ಲಿ ಅವರು ಮಾತನಾಡಿದರು.
ಉತ್ತಮ ಭವಿಷ್ಯಕ್ಕಾಗಿ ನಮಗೋಸ್ಕರ ಮತ್ತು ಮುಂದಿನ ಪೀಳಿಗೆಗೋಸ್ಕರ ಯಾವುದೇ ಉಡುಗೊರೆ, ಆಸೆ, ಅಮಿಷಗಳಿಗೆ ಒಳಗಾಗದೇ, ತಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳದೇ ಮತದಾನ ಮಾಡಬೇಕು ಎಂದರು.
*ಒಟ್ಟು 10,097 ಮತದಾರರು;* ಕೊಳಗಲ್ ಗ್ರಾಮದಲ್ಲಿ 9 ಮತಗಟ್ಟೆಗಳಿದ್ದು, ಒಟ್ಟು 10,097 ಮತದಾರರಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ಶೇಕಡಾವಾರು ಕಡಿಮೆ ಮತದಾನವಾಗಿದ್ದು, ಈ ಬಾರಿ ಶೇ.100 ರಷ್ಟು ಮತದಾನವಾಗಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ತಿಳಿಸಿದರು.
*ಸಿಂಗಾರಗೊಂಡಿದ್ದ ಎತ್ತಿನ ಬಂಡಿಗಳು*: ಮತದಾನ ಜಾಗೃತಿ ಮೂಡಿಸಲು ಭಾಗವಹಿಸಿದ್ದ ಎತ್ತಿನ ಬಂಡಿಗಳಿಗೆ ಹೂ, ತಳಿರು ತೋರಣ, ಬಣ್ಣದ ಬಲೂನ್‍ಗಳ ಮೂಲಕ ಸಿಂಗಾರಗೊಳಿಸಲಾಗಿತ್ತು. ಇದಲ್ಲದೇ, ಮತದಾನ ಅರಿವು ಮೂಡಿಸುವ ಮಾಹಿತಿ ಫಲಕಗಳನ್ನು ಸಹ ಬಂಡಿಗಳಿಗೆ ಹಾಕಲಾಗಿತ್ತು. ಮೆರವಣಿಗೆಯಲ್ಲಿ ತಳಿರು ತೋರಣಗಳಿಂದ ಸಿಂಗಾರಗೊಂಡ 40ಕ್ಕೂ ಅಧಿಕ ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಘೋಷವಾಕ್ಯಗಳು: ಓಟ್ ಮಾಡಿದವನೇ ಹೀರೋ, ನಿಮ್ಮ ಮತ - ನಿಮ್ಮ ಭವಿಷ್ಯ, ಜನ ಸಾಮಾನ್ಯರ ಶಕ್ತಿ ಮತ ಚಲಾವಣೆ, ಮತದಾನ ಮಾಡಿದವನೇ ಶೂರ, ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ ಎನ್ನುವ ಮತದಾನ ಜಾಗೃತಿ ಮೂಡಿಸುವ ಫಲಕಗಳು ರಾರಾಜಿಸಿದವು.
ಎತ್ತಿನ ಬಂಡಿಗಳ ಜಾಥಾವು ಎರ್ರಿತಾತ ದೇವಸ್ಥಾನ ಮುಂಭಾಗದಿಂದ ಆರಂಭವಾಗಿ ಗ್ರಾಮದ ಹೊಸಪೇಟೆ ಓಣಿ, ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಅಗಸೆ, ಎಸ್.ಸಿ ಕಾಲೋನಿ, ಯರಂಗಳಿ ಮುಖ್ಯ ರಸ್ತೆ ಮಾರ್ಗವಾಗಿ ಬಳ್ಳಾರಿ ರಸ್ತೆಯ ಸ್ವಾಗತ ಕಮಾನು ಇಲ್ಲಿಗೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಜಿಪಂನ ಯೋಜನಾ ನಿರ್ದೇಶಕ ಪ್ರಮೋದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ, ತಹಶೀಲ್ದಾರ ಬಲರಾಮ ಕಟ್ಟಿಮನಿ, ತಾಪಂ ಇಓ ಶ್ರೀಧರ್ ಬಾರಿಕಾರ, ಸಿಡಿಪಿಓ ಉμÁ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೊಳಗಲ್ಲು ಗ್ರಾಮಸ್ಥರು ಭಾಗವಹಿಸಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ