ಶನಿವಾರ, ಜೂನ್ 20, 2026

ವಿಶೇಷ ಗ್ರಾಮ ಸಭೆ: ಜೂನ್ 22 ರಂದು ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-2026) ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ಜೂನ್ 22 ರಂದು ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ‘ವಿಶೇಷ ಗ್ರಾಮ ಸಭೆ’ ಯನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ. ಈ ವಿಶೇಷ ಗ್ರಾಮ ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವ, ಎಸ್‌ಐಆರ್ ಪ್ರಕ್ರಿಯೆ, ವಿವಿಧ ನಮೂನೆಗಳನ್ನು ಭರ್ತಿ ಮಾಡುವ ವಿಧಾನ ಹಾಗೂ ಅದಕ್ಕೆ ಅಗತ್ಯವಿರುವ ದಾಖಲೆಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಅಲ್ಲದೇ ಬಿ.ಎಲ್.ಓ ಗಳು ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಒದಗಿಸಬೇಕಾದ ಅಗತ್ಯ ದಾಖಲೆಗಳ ವಿವರಗಳನ್ನು ಹಂಚಿಕೊಳ್ಳಲಾಗುವುದು. ಸಭೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಪ್ರಾಯೋಗಿಕ ತರಬೇತಿಯನ್ನು ಸಹ ನೀಡಲು ಉದ್ದೇಶಿಸಲಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು ನಿಗದಿಪಡಿಸಿದ ದಿನದಂದು ಯಾವುದಾದರೊಂದು ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಖುದ್ದಾಗಿ ಭಾಗವಹಿಸಿ ಎಸ್‌ಐಆರ್ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಹಾಗೂ ಈ ಕಾರ್ಯಕ್ರಮವನ್ನು ಅತ್ಯಂತ ಆದ್ಯತೆಯ ಮೇರೆಗೆ ಯಶಸ್ವಿಗೊಳಿಸುವಂತೆ ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ