ಶನಿವಾರ, ಜೂನ್ 20, 2026

ಹಿಂದುಳಿದವರ, ಕಡುಬಡವರ ಸ್ವಾವಲಂಬನೆಗೆ ಸರ್ಕಾರ ಬದ್ಧ: ಸಂಡೂರು ಶಾಸಕಿ ಈ.ಅನ್ನಪೂರ್ಣ ಹೇಳಿಕೆ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ಸಮಾಜದ ಹಿಂದುಳಿದ ಹಾಗೂ ಬಡವರ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ನಿರಂತರವಾಗಿ ಮಾಡುತ್ತಿದೆ ಎಂದು ಸಂಡೂರು ಶಾಸಕಿ ಈ. ಅನ್ನಪೂರ್ಣ ಅವರು ಹೇಳಿದರು. ಭವಿಷ್ಯ ನಿಧಿ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ, ತೋರಣಗಲ್ಲು ವಿದ್ಯಾನಗರದ ಜೆಎಸ್‌ಡಬ್ಲೂö್ಯ ಟೌನ್‌ಶಿಪ್‌ನಲ್ಲಿರುವ ‘ಜೆಮ್ಯಾಕ್ಸ್' ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ್ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ' ಅಡಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಡೂರು ತಾಲೂಕು ಸುತ್ತಮುತ್ತ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಬೇಸಾಯದ ಭೂಮಿ ತೀರಾ ಕಡಿಮೆಯಿದೆ. ಹೀಗಾಗಿ ಇಲ್ಲಿನ ಬಹುತೇಕ ಜನರು ಜೆಎಸ್‌ಡಬ್ಲೂö್ಯ ಸಂಸ್ಥೆಯನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಅವರ ಉದ್ಯೋಗ ಮತ್ತು ಜೀವನ ಭದ್ರತೆಗೆ ಸಂಸ್ಥೆ ಸದಾ ಒತ್ತು ನೀಡಬೇಕು ಎಂದು ತಿಳಿಸಿದರು. ಕೈಗಾರಿಕಾ ವಲಯದ ಸುತ್ತಮುತ್ತಲಿನ ರಾಸಾಯನಿಕ ಮಿಶ್ರಿತ ಗಾಳಿಯಿಂದಾಗಿ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಜೆಎಸ್‌ಡಬ್ಲೂö್ಯ ಸಂಸ್ಥೆಯು ವಿಶೇಷ ಗಮನಹರಿಸಬೇಕು. ಇಲ್ಲಿನ ಸುತ್ತಮುತ್ತಲಿನ ಜನರೆಲ್ಲರೂ ಗಣಿ ಕಾರ್ಮಿಕರು ಹಾಗೂ ಬಡ ವರ್ಗದವರಾಗಿದ್ದಾರೆ. ಇವರ ಹಿತದೃಷ್ಟಿಯಿಂದ ತಾಲೂಕಿನಲ್ಲಿ ಸುಸಜ್ಜಿತ ಉಚಿತ ಆಸ್ಪತ್ರೆಯೊಂದನ್ನು ಸ್ಥಾಪಿಸಿಕೊಡಬೇಕು ಎಂದು ಪ್ರಸ್ತಾಪಿಸಿದರು. ನಮ್ಮ ಸಂಡೂರು ತಾಲೂಕಿನ ಅಸ್ಮಿತೆ ಎಂದರೆ ಅದು ಜೆಎಸ್‌ಡಬ್ಲೂö್ಯ ಸಂಸ್ಥೆ. ಹೊರಗಿನವರು ಯಾರೇ ಸಂಡೂರು ಎಲ್ಲಿದೆ ಎಂದು ಕೇಳಿದಾಗ, ಜೆಎಸ್‌ಡಬ್ಲೂö್ಯ ಸಂಸ್ಥೆ ಇರುವ ಕ್ಷೇತ್ರ ಎಂದು ಗುರುತಿಸಿದರೆ ತಕ್ಷಣವೇ ಜನ ಗುರುತಿಸುತ್ತಾರೆ. ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ನೆರವು ಸಿಗುತ್ತಿದ್ದು, ಸಂಸ್ಥೆಯು ಸಮಾಜಸೇವೆಯಲ್ಲಿಯೂ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು. ವಿಕಸಿತ ಭಾರತ ಯಾತ್ರೆಯಲ್ಲಿ ಹಲವು ಕೈಗಾರಿಕಾ ಸಂಸ್ಥೆಗಳೊAದಿಗೆ ನಾವೆಲ್ಲರೂ ಸದೃಢ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೈಗಾರಿಕಾ ಸಂಸ್ಥೆಗಳು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆದು, ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಹಾಗೂ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿ ಎಂದು ಆಶಿಸಿದರು. ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಆಯುಕ್ತ ಕೆ.ವಿ. ಪ್ರವೀಣ್ ಅವರು ಮಾತನಾಡಿ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿ ಭವಿಷ್ಯ ನಿಧಿ ಖಾತೆ ಪಡೆಯುತ್ತಿರುವ ಹೊಸ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ. ಬಳ್ಳಾರಿ ವಲಯದಲ್ಲಿ ಇದುವರೆಗೆ ಇಂತಹ 1,374 ಹೊಸ ಕಾರ್ಮಿಕರು ಈ ಯೋಜನೆಯಡಿ ನೇರ ಹಣಕಾಸು ನೆರವು ಪಡೆಯಲು ಅರ್ಹರಾಗಿದ್ದಾರೆ. ಈ ಭಾಗದಡಿ ಉದ್ಯೋಗಿಗಳಿಗೆ ನೇರ ಲಾಭ ಸಿಗದಿದ್ದರೂ, ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಬಳ್ಳಾರಿ ವಲಯದಲ್ಲಿ ಇಂತಹ 248 ಉದ್ಯೋಗದಾತ ಸಂಸ್ಥೆಗಳು ಈ ಸೌಲಭ್ಯ ಪಡೆದುಕೊಂಡಿವೆ. ಕೇಂದ್ರ ಸರ್ಕಾರದ ಈ ವಿನೂತನ ಯೋಜನೆಯು ಬಳ್ಳಾರಿ ಭಾಗದ ಸಾವಿರಾರು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕವಾಗಿ ದೊಡ್ಡ ಆಸರೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸದಾಗಿ ಉದ್ಯೋಗಕ್ಕೆ ಸೇರಿದ ಅರ್ಹ ಉದ್ಯೋಗಿಗಳಿಗೆ ಪ್ರೋತ್ಸಾಹ ಸೌಲಭ್ಯ ವಿತರಣೆ ಮಾಡಿದ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು. ಬಳಿಕ ಮೊದಲ ಬಾರಿ ಉದ್ಯೋಗಕ್ಕೆ ಸೇರಿ ಇಪಿಎಫ್‌ಓ ಖಾತೆ ಹೊಂದಿದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ವಿತರಣೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ ವಿಶ್ವಜಿತ್ ಮೆಹೆತಾ, ಇಪಿಎಫ್‌ಓ ಸಂಸ್ಥೆಯ ಹಿರಿಯ ಅಧಿಕಾರಿಗಳು, ಜೆಎಸ್‌ಡಬ್ಲೂö್ಯ ಸಂಸ್ಥೆಯ ಅಧಿಕಾರಿಗಳು, ಉದ್ಯೋಗದಾತ ಕಂಪನಿಯ ಅಧಿಕಾರಿಗಳು, ಉದ್ಯೋಗಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ