ಶನಿವಾರ, ಜೂನ್ 20, 2026

ಬಳ್ಳಾರಿ ಜಿಲ್ಲೆಯಲ್ಲಿ ವಿಶೇಷ ‘ರೌಡಿ ನಿಗ್ರಹ ತಂಡ’ ರಚನೆ: ಎಸ್ಪಿ ಆದೇಶ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ರೌಡಿ ಆಸಾಮಿಗಳ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಉಸ್ತುವಾರಿಯಲ್ಲಿ ಜಿಲ್ಲೆಯಾದ್ಯಂತ 03 ವಿಶೇಷ “ರೌಡಿ ನಿಗ್ರಹ ತಂಡ”ಗಳನ್ನು ರಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಆದೇಶಿಸಿದ್ದಾರೆ. *ಮೂರು ಉಪ-ವಿಭಾಗಗಳಲ್ಲಿ ಹದ್ದಿನ ಕಣ್ಣು:* ರೌಡಿಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಬಳ್ಳಾರಿ ನಗರ, ಸಿರುಗುಪ್ಪ ಹಾಗೂ ತೋರಣಗಲ್ಲು ಉಪ-ವಿಭಾಗದ ಮೂವರು ಡಿ.ಎಸ್.ಪಿ. ಗಳ ನೇತೃತ್ವದಲ್ಲಿ ಈ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಲ್ಲಿ ಸಿ.ಪಿ.ಐ., ಪಿ.ಎಸ್.ಐ. ಹಾಗೂ ನುರಿತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. *ರೌಡಿ ನಿಗ್ರಹ ತಂಡದ ಜವಾಬ್ದಾರಿಗಳು:* ನಿರಂತರ ನಿಗಾ: ಉಪ-ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೌಡಿ ಆಸಾಮಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವುದು. ಹಳೆ ಪ್ರಕರಣಗಳ ಮರುಪರಿಶೀಲನೆ: ರೌಡಿಗಳ ವಿರುದ್ಧ ಈಗಾಗಲೇ ದಾಖಲಾಗಿರುವ ಪ್ರಕರಣಗಳ ಪರಿಶೀಲನೆ ಹಾಗೂ ಸೂಕ್ತ ದಾಖಲಾತಿಗಳನ್ನು ನಿರ್ವಹಿಸುವುದು. ಗೂಂಡಾ ಕಾಯ್ದೆ ಪ್ರಸ್ತಾಪ: ಪದೇ ಪದೇ ಕಾನೂನು ಕೈಗೆತ್ತಿಕೊಳ್ಳುವ ಹಾಗೂ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಗಡಿಪಾರು, ಗೂಂಡಾ ಕಾಯ್ದೆ ಹಾಗೂ ಕೋಕಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸುವುದು. ಹಠಾತ್ ದಾಳಿ: ಜಿಲ್ಲೆಯ ಸೂಕ್ಷö್ಮ ಪ್ರದೇಶಗಳಲ್ಲಿ ಹಠಾತ್ ದಾಳಿಗಳನ್ನು ನಡೆಸಿ, ರೌಡಿ ಆಸಾಮಿಗಳನ್ನು ತಪಾಸಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದು. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಮೂರು ವಿಶೇಷ ತಂಡಗಳು ಸತತವಾಗಿ ಕಾರ್ಯಾಚರಣೆಯಲ್ಲಿ ತೊಡಗಿರುತ್ತವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ